ADVERTISEMENT

ಶಿವಮೊಗ್ಗ: ಶಿಥಿಲಾವಸ್ಥೆಯ ಶಾಲೆಗೆ ಹೊಸ ರೂಪ

ಹರಮಘಟ್ಟ: ಹಳೆಯ ವಿದ್ಯಾರ್ಥಿಗಳ ನೆರವು: ₹ 30 ಲಕ್ಷ ದೇಣಿಗೆ

ವೆಂಕಟೇಶ ಜಿ.ಎಚ್.
Published 14 ಜೂನ್ 2025, 18:43 IST
Last Updated 14 ಜೂನ್ 2025, 18:43 IST
ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಹೊಸ ರೂಪ ಪಡೆದಿರುವ ಶಿವಮೊಗ್ಗ ತಾಲ್ಲೂಕು ಹರಮಘಟ್ಟದ ಸರ್ಕಾರಿ ಶಾಲೆಯ ನೋಟ
ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಹೊಸ ರೂಪ ಪಡೆದಿರುವ ಶಿವಮೊಗ್ಗ ತಾಲ್ಲೂಕು ಹರಮಘಟ್ಟದ ಸರ್ಕಾರಿ ಶಾಲೆಯ ನೋಟ   

ಶಿವಮೊಗ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಮನವಿಗೆ ಸ್ಪಂದಿಸಿದ ತಾಲ್ಲೂಕಿನ ಹರಮಘಟ್ಟ ಗ್ರಾಮದ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲೆಯ ಕಟ್ಟಡವನ್ನು ₹ 30 ಲಕ್ಷ ವೆಚ್ಚದಲ್ಲಿ ನವೀಕರಿಸಿದ್ದಾರೆ.

ಹರಮಘಟ್ಟದ ಸರ್ಕಾರಿ ಶಾಲೆ ಕಟ್ಟಡ 1952ರಲ್ಲಿ ನಿರ್ಮಾಣವಾಗಿದೆ. 74 ವರ್ಷ ಹಳೆಯ ಕಟ್ಟಡದ ಹೆಂಚಿನ ಚಾವಣಿ ಸೋರುತ್ತಿತ್ತು, ಕಿಟಕಿ– ಬಾಗಿಲು ಮುರಿದಿದ್ದವು. ಮಣ್ಣಿನ ಗೋಡೆ ಕಾಣುತ್ತಿತ್ತು. ನೆಲಹಾಸು ಗುಂಡಿ ಬಿದ್ದಿತ್ತು. ವಿದ್ಯಾರ್ಥಿಗಳು ಕೂರಲೂ ಆಗದ ಪರಿಸ್ಥಿತಿ ಇತ್ತು.

ಇದೇ ವೇಳೆ, ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ನೆರವು ಪಡೆಯುವಂತೆ ಇಲಾಖೆಯಿಂದ ಸುತ್ತೋಲೆ ಬಂದಿದೆ. ಆಗ ಶಾಲೆಯ ಮುಖ್ಯಶಿಕ್ಷಕಿ ಕೆ.ಎಸ್.ಗಾಯತ್ರಿ, ಗ್ರಾಮದ ಮುಖಂಡ ಮಂಜ‍ಪ್ಪ ಅವರ ಸಹಕಾರದಿಂದ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಕೋರಿದ್ದಾರೆ.

ADVERTISEMENT

ನಂತರ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಊರಿನ ಹಿರಿಯರನ್ನು ಸೇರಿಸಿ ಸಭೆ ನಡೆಸಿದ್ದಾರೆ. ಆಗ ನಿವೃತ್ತ ಶಿಕ್ಷಕ ಪ್ರಕಾಶಪ್ಪ ಅಧ್ಯಕ್ಷತೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ, ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.

‘ಸಂಘದ ಮೇಲ್ವಿಚಾರಣೆಯಲ್ಲೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಗೋಡೆಗಳ ಸಿಮೆಂಟ್ ಪ್ಲಾಸ್ಟರಿಂಗ್, ಸುಣ್ಣ–ಬಣ್ಣದೊಂದಿಗೆ ಶಾಲೆಯ ಆರು ಕೊಠಡಿಗಳು ನವೀಕರಣಗೊಂಡಿವೆ. ಹೊಸದಾಗಿ ಬಾಗಿಲು, ಕಿಟಕಿ ಹಾಗೂ ಹೆಂಚುಗಳನ್ನು ಜೋಡಿಸಲಾಯಿತು. ನೆಲಕ್ಕೆ ಗ್ರಾನೈಟ್ ಹಾಕಿಸಿ, ಕಾಂಪೌಂಡ್ ದುರಸ್ತಿ ಮಾಡಿ, ಗೇಟ್, ನಾಲ್ಕು ಓವರ್ ಹೆಡ್‌ ಟ್ಯಾಂಕ್, ಸಭಾಂಗಣ, ಕೈತೋಟ ನಿರ್ಮಿಸಲಾಯಿತು’ ಎಂದು ಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನವಿಗೆ ಸ್ಪಂದಿಸಿ ಶಾಲೆ ಅಭಿವೃದ್ಧಿಗೆ ಕೆಲವರು ಹಣ, ಇನ್ನೂ ಕೆಲವರು ವಸ್ತುಗಳನ್ನು ದೇಣಿಗೆ ಕೊಟ್ಟರು. ₹ 100ರಿಂದ ₹ 50,000ದವರೆಗೆ ನೆರವು ಕೊಟ್ಟರು’ ಎಂದು ಸ್ಮರಿಸಿದರು.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸದ್ಯ 160 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಕೂಡ ಆರಂಭಿಸಲಾಗಿದೆ.

ಹರಮಘಟ್ಟದ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಕಟ್ಟಿಸಿಕೊಟ್ಟ ಸಭಾಂಗಣ
ಶಾಲೆಯ ಶಿಥಿಲ ಕಟ್ಟಡ ನವೀಕರಿಸಲು ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಊರಿನವರು ಮಾತ್ರವಲ್ಲ ಬೆಂಗಳೂರಿನಲ್ಲಿ ನೆಲೆಸಿರುವವರೂ ಕೈಜೋಡಿಸಿದ್ದಾರೆ.
ಕೆ.ಎಸ್.ಗಾಯತ್ರಿ ಹರಮಘಟ್ಟ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ
ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಮ್ಮೂರ ಶಾಲೆ ಅಭಿವೃದ್ಧಿಪಡಿಸಿದ್ದೇವೆ. ಮಕ್ಕಳೇ ದೇವರು. ದೇವಸ್ಥಾನಕ್ಕೆ ಕೊಡುವ ಹಣವನ್ನು ಶಾಲೆಗೆ ಕೊಟ್ಟರೆ ದೇವರಿಗೆ ಕೊಟ್ಟಂತೆ ಆಗಲಿದೆ
ಎನ್‌.ಜಿ.ಪ್ರಕಾಶಪ್ಪ ಶಾಲೆಯ ಹಳೆ ವಿದ್ಯಾರ್ಥಿ
ಹರಮಘಟ್ಟ ಶಾಲೆಯ ಹಳೆಯ ವಿದ್ಯಾರ್ಥಿಗಳದು ಮಾದರಿ ಕಾರ್ಯ. ಇದರಿಂದ ಪ್ರೇರಿತರಾಗಿ ತಾಲ್ಲೂಕಿನ ಹಲವೆಡೆ ಹಳೆಯ ವಿದ್ಯಾರ್ಥಿಗಳು ಓದಿದ ಶಾಲೆಗಳ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ
ರಮೇಶ್ ನಾಯ್ಕ ಶಿವಮೊಗ್ಗ ನಗರ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.