ಶಿವಮೊಗ್ಗ: ‘ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಉಪಕರಣ ತರಿಸಿಕೊಟ್ಟು ಎರಡು ತಿಂಗಳಾದರೂ ಅಳವಡಿಕೆ ಮಾಡಿಲ್ಲ’ ಎಂದು ಶನಿವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ಬಿ.ವೈ.ರಾಘವೇಂದ್ರ, ‘ವಿಮಾನ ನಿಲ್ದಾಣದ ನಿರ್ವಹಣೆ ರಾಜ್ಯ ಸರ್ಕಾರದ ಸುಪರ್ದಿಗೆ ಕೊಟ್ಟು ತಪ್ಪು ಮಾಡಿದ್ದೇವೆ’ ಎಂದು ಹೇಳಿದರು.
ಬಂಜಾರ ಸಂಘದಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದೆಹಲಿಯಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದೆ. ಶಿವಮೊಗ್ಗದಲ್ಲೇ ವಿಮಾನ ನಿಲ್ದಾಣ ಇದ್ದರೂ ರಾತ್ರಿ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದೆ’ ಎಂದರು.
‘ನೈಟ್ ಲ್ಯಾಂಡಿಂಗ್ ಉಪಕರಣ ಬಂದು ಹಲವು ತಿಂಗಳಾದರೂ ಕೆಲಸ ಆರಂಭವಾಗಿಲ್ಲ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ (ಎಎಐ) ಇಟ್ಟುಕೊಂಡಿದ್ದರೆ ಇಷ್ಟು ವಿಳಂಬ ಆಗುತ್ತಿರಲಿಲ್ಲ. ನೈಟ್ ಲ್ಯಾಂಡಿಂಗ್ ಉಪಕರಣ ಅಳವಡಿಕೆಗೆ ಸಿವಿಲ್ ಕಾಮಗಾರಿಗೆ ರಾಜ್ಯ ಸರ್ಕಾರ ₹ 2 ಕೋಟಿ ಕೊಡಬೇಕಿದೆ. ಸಂಪುಟ ಸಭೆ, ಟೆಂಡರ್ ಇತ್ಯಾದಿ ಪ್ರಕ್ರಿಯೆಗಳ ಕಾರಣಕ್ಕೆ ವಿಳಂಬವಾಗುತ್ತಿದೆ. ನಮ್ಮ ತಂದೆ ಸಿಎಂ ಆಗಿದ್ದಾಗಲೇ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ನೀಡಿದ್ದು, ನಾವೇ ತಪ್ಪು ಮಾಡಿದ್ದೇವೆ ಅನ್ನಿಸುತ್ತಿದೆ’ ಎಂದು ರಾಘವೇಂದ್ರ ಹೇಳಿದರು.
‘ಕೇಂದ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಗೆ ದೆಹಲಿ ಮಟ್ಟದಲ್ಲಿ ನಾನು ಪ್ರಯತ್ನ ಮಾಡುತ್ತೇನೆ. ಹೆಚ್ಚುವರಿ ವಿಮಾನಗಳನ್ನು ಬಿಡಿಸಬಹುದು. ಆದರೆ, ಇಲ್ಲಿ ವಿಮಾನಗಳು ರಾತ್ರಿ ವೇಳೆ ಬಂದಿಳಿಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಶಿವಮೊಗ್ಗ ಜಿಲ್ಲೆಗೆ ಬರಬೇಕಿದ್ದ ಅವಕಾಶಗಳು ಬೇರೆ ಕಡೆ ಹೋಗುತ್ತಿವೆ. ರಾಜ್ಯ ಸರ್ಕಾರ ಈ ದಿಸೆಯಲ್ಲಿ ಆಸಕ್ತಿ ವಹಿಸಬೇಕು’ ಎಂದು ಒತ್ತಾಯಿಸಿದರು.
ನೀರಾವರಿ ಯೋಜನೆಗಳಿಗೆ ರಾಜ್ಯದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ, ‘ರಾಜ್ಯ ಸರ್ಕಾರಕ್ಕೆ ಕೇಂದ್ರ ಕೊಟ್ಟ ಹಲವು ಅನುದಾನಗಳು ಇಲ್ಲಿ ಬಳಕೆಯಾಗದೇ ವಾಪಸ್ ಹೋಗಿವೆ. ಸರಿಯಾದ ತಾಂತ್ರಿಕ ಮಾಹಿತಿಯನ್ನು ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಒದಗಿಸದೇ ಇರುವುದರಿಂದ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಲು ನಾನು ಸಿದ್ಧ. ಈ ಬಗ್ಗೆ ಡಿಸಿಎಂ ಜೊತೆಗೆ ದೆಹಲಿಯ ಕರ್ನಾಟಕ ಭವನದಲ್ಲಿ ಹಲವು ಸಭೆಗಳ ನಡೆಸಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ’ ಎಂದರು.
ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆ.ಜೆ.ನಾಗೇಶ ನಾಯ್ಕ, ಬಸವರಾಜ್ ನಾಯ್ಕ್, ನಾನ್ಯಾ ನಾಯ್ಕ, ಜಗದೀಶ್ ನಾಯ್ಕ, ನಾಗರಾಜ ನಾಯ್ಕ, ಗಂಗಾನಾಯ್ಕ, ರಮೇಶ ನಾಯ್ಕ, ಶಿವಾನಾಯ್ಕ, ಗಿರೀಶ್ ನಾಯ್ಕ, ಆನಂದ ನಾಯ್ಕ ಇದ್ದರು.
- ‘ಒಳಮೀಸಲಾತಿ ದುರ್ಬಲ ವರ್ಗಗಳಿಗೆ ಅನ್ಯಾಯ’
ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಿಂದ ದುರ್ಬಲ ವರ್ಗಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಬಂಜಾರ ಸಂಘ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸರ್ಕಾರ ಕಾಂತರಾಜ್ ವರದಿ ನಾಗಮೋಹನ ದಾಸ್ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ. ₹150 ಕೋಟಿ ತೆರಿಗೆ ಹಣ ಖರ್ಚು ಮಾಡಿ ಕಾಂತರಾಜ್ ವರದಿ ನೀಡಿದರೂ ಅದನ್ನು ಕೂಡ ಜಾರಿಗೊಳಿಸಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.