ADVERTISEMENT

ಶಿವಮೊಗ್ಗ | ಪೊಲೀಸ್‌ ಅಧಿಕಾರಿ ದರ್ಪದ ವರ್ತನೆ ಆರೋಪ: ಕ್ರಮಕ್ಕೆ ಆಗ್ರಹ

ವರದಿಗಾರಿಕೆಗೆ ತೆರಳಿದ ಪತ್ರಕರ್ತನಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 15:58 IST
Last Updated 22 ಆಗಸ್ಟ್ 2024, 15:58 IST
ಶಿವಮೊಗ್ಗದಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ವತಿಯಿಂದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಶಿವಮೊಗ್ಗದಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ವತಿಯಿಂದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು   

ಶಿವಮೊಗ್ಗ: ತೀರ್ಥಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ ಸಂದರ್ಭ ವಿಡಿಯೊ ಚಿತ್ರೀಕರಿಸುವಾಗ ಅಶ್ವಥ್ ಗೌಡ ಸಿಬ್ಬಂದಿಗೆ ಸೂಚನೆ ನೀಡಿ ಬಲವಂತವಾಗಿ ಮೊಬೈಲ್ ಫೋನ್‌ ಕಿತ್ತುಕೊಂಡು ಠಾಣೆಗೆ ಹೋಗಿದ್ದಾರೆ. ಮೊಬೈಲ್ ಫೋನ್‌ ಪಡೆಯಲು ಠಾಣೆಗೆ ಹೋದಾಗ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ ಇತರ ಪತ್ರಕರ್ತರ ಜೊತೆಗೂ ದರ್ಪದಿಂದ ವರ್ತಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ತೀರ್ಥಹಳ್ಳಿ ಠಾಣೆಯಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ವರದಿ ನೀಡುವಂತೆ ಡಿವೈಎಸ್‌ಪಿಗೆ ಸೂಚಿಸಿದ್ದೇನೆ. ನಂತರ ಸತ್ಯಾಸತ್ಯತೆ ಅಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಿಥುನ್‌ಕುಮಾರ್ ಹೇಳಿದರು.

ADVERTISEMENT

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪತ್ರಕರ್ತರಾದ ಎನ್. ರವಿಕುಮಾರ್, ವಿ.ಟಿ.ಅರುಣ್, ನಾಗರಾಜ ನೇರಿಗೆ, ಜೇಸುದಾಸ್‌, ರವಿಕುಮಾರ್ ಟೆಲೆಕ್ಸ್‌, ಚಂದ್ರಶೇಖರ ಶೃಂಗೇರಿ, ವೈದ್ಯನಾಥ, ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್‌, ಅಶ್ವಿನಿ ನಾಯಕ್, ಶಿವಾನಂದ ಕರ್ಕಿ, ಹುಚ್ಚರಾಯಪ್ಪ ಈ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.