ADVERTISEMENT

ಆನವಟ್ಟಿ: ಕೃಷಿ ಸ್ವಾವಲಂಬನೆಗೆ ದಾರಿಯಾದ ಹೈನುಗಾರಿಕೆ

ಆನವಟ್ಟಿ ಸಮೀಪದ ಅಗಸನಹಳ್ಳಿಯಲ್ಲಿ ‘ಸಿರಿಕೃಷಿ’ ಬೆಳೆಸಿದ ವಿನಯ ಅಪರಂಜಿ

ರವಿ ಆರ್.ತಿಮ್ಮಾಪುರ
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ಆಧುನಿಕ ರಸಮೇವು ಯಂತ್ರದೊಂದಿಗೆ ವಿನಯ ಅಪರಂಜಿ. ಮೇವು ಸಿದ್ದಮಾಡಿ ಯಂತ್ರಗಳೇ ಪ್ಯಾಕ್ ಮಾಡಿರುವ ಬ್ಯಾಗ್‌ಗಳು.
ಆಧುನಿಕ ರಸಮೇವು ಯಂತ್ರದೊಂದಿಗೆ ವಿನಯ ಅಪರಂಜಿ. ಮೇವು ಸಿದ್ದಮಾಡಿ ಯಂತ್ರಗಳೇ ಪ್ಯಾಕ್ ಮಾಡಿರುವ ಬ್ಯಾಗ್‌ಗಳು.   

ಆನವಟ್ಟಿ: ಹೈನುಗಾರಿಕೆಯ ತ್ಯಾಜ್ಯವನ್ನು ಕೃಷಿಗೆ, ಕೃಷಿ ತ್ಯಾಜ್ಯವನ್ನು ಹೈನುಗಾರಿಕೆಯಲ್ಲಿ ಬಳಸುವ ಮೂಲಕ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ ವಿನಯ ಅಪರಂಜಿ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂಬುದನ್ನು ಆನವಟ್ಟಿ ಸಮೀಪದ ಅಗಸನಹಳ್ಳಿಯ ವರದಾ ಸೇತುವೆಯ ಬಳಿ ಇರುವ ‘ಸಿರಿಕೃಷಿ’ಯಲ್ಲಿ ಸಾಬೀತು ಮಾಡಿ ತೋರಿಸಿದ್ದಾರೆ.

ವಿನಯ ಅಪರಂಜಿ ಅವರು ಕೃಷಿಯಲ್ಲಿ ಬಿ.ಎಸ್‌ಸಿ. ಅಧ್ಯಯನ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಿದರು. ನಂತರ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿ 20 ಎಕರೆ ಅಡಮಾನ ಪದ್ಧತಿಯಲ್ಲಿ (ಲೀಜ್) ಜಮೀನು ಪಡೆದು 4 ವರ್ಷಗಳಿಂದ ‘ಸಿರಿಕೃಷಿ’ ಉದ್ಯಮ ನಡೆಸುತ್ತಿದ್ದಾರೆ.

ಮಿಶ್ರ ಬೆಳೆ ಪದ್ಧತಿಯಲ್ಲಿ 2 ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಶುಂಠಿ, ಅರಿಸಿಣ, ತೊಗರಿ, ಹಸಿ ಮೆಣಸು ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಹಸುಗಳಿಗೆ ಮೇವು ತಯಾರಿಸಲು ಮೆಕ್ಕೆಜೋಳ ಬೆಳೆದಿದ್ದಾರೆ. ಮೇವು ಕಡಿಮೆಯಾದರೆ ಬೇರೆ ರೈತರಿಂದ ಮೆಕ್ಕೆಜೋಳ ಗಿಡಗಳನ್ನು ಟನ್ ಲೆಕ್ಕದಲ್ಲಿ ಖರೀದಿ ಮಾಡುತ್ತಾರೆ.

ADVERTISEMENT

ಹಸುಗಳಿಗೆ ಮೇವು ತಯಾರಿಸಲು ಆಧುನಿಕ ರಸಮೇವು ತಯಾರಿಕೆ ಯಂತ್ರವನ್ನೂ ಆಳಡಿಸಿಕೊಂಡಿದ್ದಾರೆ. ತಿನ್ನುವ ಹದಕ್ಕೆ ಬಂದಿರುವ ಮೆಕ್ಕೆಜೋಳ ಬೆಳೆಯನ್ನು ಕಟಾವು ಮಾಡಿ, ಯಂತ್ರಕ್ಕೆ ಹಾಕಿದಾಗ ಹಸುಗಳಿಗೆ ತಿನ್ನಲು ಅನುಕೂಲವಾಗುವ ಹದಕ್ಕೆ ಕತ್ತರಿಸಿ, ನಂತರ ಹೈಡ್ರೋಲಿಕ್ ಗಾಳಿಯೊಂದಿಗೆ ಚೀಲದಲ್ಲಿ ಯಂತ್ರವೇ ಪ್ಯಾಕ್ ಮಾಡುತ್ತದೆ. ಇದನ್ನು ಸ್ವಲ್ಪ ದಿನಗಳ ಕಾಲ ಬ್ಯಾಗ್‌ನಲ್ಲೇ ಇರಿಸಿ, ಅದು ಸತ್ವಯುಕ್ತ ಆಹಾರವಾದ ಮೇಲೆ ಜಾನುವಾರುಗಳಿಗೆ ನೀಡಬೇಕು. ಆಗ ಹಸುಗಳಿಗೆ ಹೆಚ್ಚು ಪೋಷಕಾಂಶಯುಕ್ತ
ಆಹಾರ ದೊರೆಯುತ್ತದೆ. ಜೊತೆಗೆ ದಪ್ಪ ಹಾಲು ಸಹ ಸಿಗುತ್ತದೆ.

ವರದಾ ಹಾಲು: ಉತ್ಪಾದನೆ ಮಾಡಿದ ಹಾಲನ್ನು ಡೇರಿಗಳಿಗೆ ಹಾಕುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ ಎಂದು ಯೋಚಿಸಿದ ಅವರು 3 ತಿಂಗಳ ಹಿಂದೆ ಸ್ವಂತ ಹಾಲಿನ ಬ್ರ್ಯಾಂಡ್ ‘ವರದಾ’ವನ್ನು ಪರಿಚಯಿಸಿದ್ದಾರೆ. ಎಚ್‌ಎಫ್, ಜರ್ಸಿ, ಗಿರ್ ಸೇರಿ ವಿವಿಧ ತಳಿಯ 30 ಹಸುಗಳು ಇವೆ. ನಿತ್ಯ 300 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಬೆಳಿಗ್ಗೆ 4.30ಕ್ಕೆ ಎದ್ದು ಫಾರ್ಮ್‌ಗೆ ಬರುವ ಅವರು ಪರಿಷ್ಕರಣೆ ಮಾಡುವ ಬದಲು 100 ಲೀಟರ್ ಹಾಲನ್ನು ತಣ್ಣಗೆ ಮಾಡಿ, ಕೆನೆ ತೆಗೆಯದೇ ಪರಿಶುದ್ಧ ಹಾಲನ್ನು ಪ್ಯಾಕ್ ಮಾಡಿ 2 ತಾಸಿನ ಒಳಗೆ ಸುತ್ತಲಿನ ಮನೆಗಳಿಗೆ ತಲುಪಿಸುತ್ತಾರೆ.

ಹೈನುಗಾರಿಕೆ ಉದ್ಯಮ ನೋಡಿಕೊಳ್ಳಲು ಎರಡು ಕುಟುಂಬಗಳಿಗೆ ಮನೆ ನಿರ್ಮಿಸಿದ್ದು ಅವರು ಫಾರ್ಮ್‌ನಲ್ಲೇ ಉಳಿದುಕೊಳ್ಳುತ್ತಾರೆ. ಕೆಲಸಕ್ಕೆ ಬೇಕಾಗುವ ಕೂಲಿಗಳನ್ನು, ಕೆಲಸದ ಅನುಸಾರವಾಗಿ ನಿತ್ಯ ಕರೆತರಲಾಗುತ್ತದೆ. ವರ್ಷಕ್ಕೆ 150 ಟ್ರ್ಯಾಕ್ಟರ್ ಸಗಣಿ ಗೊಬ್ಬರ ಉತ್ಪಾದನೆಯಾಗುತ್ತಿದೆ. ಸ್ವಂತ ಕೃಷಿ ಬಳಕೆಗೆ ಬಳಸಿಕೊಂಡು ಉಳಿದ 50 ಟ್ರ್ಯಾಕ್ಟರ್‌ಗಳಷ್ಟು ಗೊಬ್ಬರವನ್ನು ಹೊರಗಡೆ ಮಾರಾಟ ಮಾಡುತ್ತಾರೆ. ವರದಾ ನದಿಯ ದಡದಲ್ಲೇ ಇರುವುದದರಿಂದ ನೆರೆ ಹಾವಳಿಯಿಂದಾಗಿ ಕಳೆದ ಎರಡು ವರ್ಷ ಹಾನಿಯಾದ ಕಾರಣ
70 ಇದ್ದ ಹಸುಗಳನ್ನು 30ಕ್ಕೆ ಇಳಿಸಿದ್ದಾರೆ.

(ಮೊಬೈಲ್ 9901724635 ಸಂಪರ್ಕಿಸಬಹುದು)

......

ಕೃಷಿಯಲ್ಲಿ ಮಿಶ್ರ ಬೆಳೆಗೆ ಒತ್ತು ನೀಡಬೇಕು. ಹೈನುಗಾರಿಕೆಯಿಂದ ಚಲಾವಣೆಯ ಹಣ ಪಡೆದು ಕೃಷಿಗೆ ಬಂಡವಾಳ ಹೂಡಿಕೆ ಮಾಡಬಹುದು. ಸ್ವಂತ ಬ್ರ್ಯಾಂಡ್‌ ಮಾಡಿ ವ್ಯವಹರಿಸುವುದರಿಂದ ಹೆಚ್ಚಿನ ಲಾಭ ಗಳಿಸಬಹುದು.

- ವಿನಯ ಅಪರಂಜಿ, ಕೃಷಿಕ, ಹೈನುಗಾರಿಕೆ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.