ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯನ್ನು ಸೀಳುವ ಕಾಮಗಾರಿ ಅವೈಜ್ಞಾನಿಕ ಎಂದು ಆರೋಪಿಸಿ, ಇಲ್ಲಿನ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಚೇರಿಗೆ ಬುಧವಾರ ಮತ್ತಿಗೆ ಹಾಕಲು ಮುಂದಾದ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದ ರೈತರ ಗುಂಪನ್ನು ತಡೆದ ಪೊಲೀಸರು ವಶಕ್ಕೆ ಪಡೆದರು.
‘ಭದ್ರಾ ನೀರು ನಮ್ಮ ಹಕ್ಕು, ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ’ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು ನಿಗಮದ ಮುಂಭಾಗದಲ್ಲಿ ಜಮಾಯಿಸಿದರು. ಹೆದ್ದಾರಿಯಲ್ಲೇ ಧರಣಿ ಕುಳಿತು ವಾಹನ ಸಂಚಾರ ತಡೆದರು. ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
‘ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಜೀವನಾಡಿ. ಜಿಲ್ಲೆಯ ರೈತರ ಬದುಕನ್ನೇ ಮುಳುಗಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಪ್ರತಿ ವರ್ಷದಂತೆ ಜುಲೈ ಮೊದಲ ವಾರದಲ್ಲಿ ನೀರು ಹರಿಸಬೇಕಿತ್ತು. ಆದರೆ, ನಾಲೆಯನ್ನು ಸೀಳಿರುವುದರಿಂದ ನೀರು ಹರಿಸಿಲ್ಲ. ರೈತರು ಸಸಿ ಮಡಿ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರ ಹೊಲಗಳಿಗೆ ನೀರಿನ ಲಭ್ಯತೆ ಕಡಿಮೆ ಆಗಲಿದೆ. ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ’ ಎಂದು ಆರೋಪಿಸಿದರು.
‘ಕುರ್ಚಿ ಕದನದ ನಡುವೆ ರೈತರ ಸಮಸ್ಯೆ ಸರ್ಕಾರಕ್ಕೆ ಕಾಣುತ್ತಿಲ್ಲ. ಜಲಾಶಯದ 70 ಅಡಿ ಆಳದಲ್ಲಿ 4 ಅಡಿ ವ್ಯಾಸದ ಪೈಪ್ ಕೂರಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಇಲ್ಲಿ ಗೇಟ್ ಕೂರಿಸಲು ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ, ಜಲಾಶಯ ಅರ್ಧದಷ್ಟು ಖಾಲಿ ಆಗಲಿದೆ. ಮುಂಬರುವ ದಿನದಲ್ಲಿ ಸಮರ್ಪಕ ಮಳೆ ಆಗದೇ ಇದ್ದರೆ, ರೈತರ ಪಾಡೇನು’ ಎಂದು ಪ್ರಶ್ನಿಸಿದ ಪ್ರತಿಭಟನಕಾರರು, ರೈತರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಸಂಚು ರೂಪಿಸಿದೆ ಎಂದು ದೂರಿದರು.
ಪ್ರತಿಭಟನಕಾರರ ಮನವೊಲಿಸಲು ನಿಗಮದ ಮುಖ್ಯ ಎಂಜಿನಿಯರ್ ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡ ಧರಣಿ ಸಂಜೆ 4.30ರವರೆಗೂ ನಡೆಯಿತು. ಬಳಿಕ ಬ್ಯಾರಿಕೇಡ್ ನೂಕಿ ಒಳನುಗ್ಗಲು ಪ್ರಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ವಾಹನ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿತ್ತು. 100ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದರು. ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ 1500ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ್ ನಾಯ್ಕ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೆಬಾಳು, ರೈತ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಇದ್ದರು.
‘ಜಲಾಶಯಕ್ಕೆ ಭೇಟಿ ನಂತರ ಡಿಕೆಶಿ ಕ್ರಮ’ ‘
ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇಲ್ಲಿನ ಸಾಧಕ– ಬಾಧಕ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ರಾಜ್ಯ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಾನಂದ ಬಣಕಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.