ADVERTISEMENT

ಶಿವಮೊಗ್ಗ: ಚರ್ಚೆಗೆ ಗ್ರಾಸವಾದ ಬಿ.ಡಿ.ಭೂಕಾಂತ್‌ಗೆ ಸಚಿವ ಸ್ಥಾನಮಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:16 IST
Last Updated 12 ಫೆಬ್ರುವರಿ 2026, 6:16 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಶಿವಮೊಗ್ಗ: ಜಿಲ್ಲೆಯ ನಾಲ್ವರು ಸೇರಿದಂತೆ ರಾಜ್ಯದ 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ ಫೆ.7ರಂದು ರಾಜ್ಯ ಸರ್ಕಾರ ಆದೇಶಿಸಿದೆ. ವಿಶೇಷವೆಂದರೆ ಸಚಿವ ದರ್ಜೆಯ ಯೋಗ ಪಡೆದವರ ಪಟ್ಟಿಯಲ್ಲಿ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ, ಶಿಕಾರಿಪುರದ ಬಿ.ಡಿ.ಭೂಕಾಂತ್‌ ಸೇರ್ಪಡೆ ಆಗಿದ್ದಾರೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭೂಕಾಂತ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕಕ್ಕೆ ಮುಜುಗರದ ಸಂಗತಿಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಸನ್ನ ಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ‘ಬಿ.ಡಿ.ಭೂಕಾಂತ್‌ ಕಾಂಗ್ರೆಸ್‌ ಪಕ್ಷದವರಲ್ಲ. ಅವರಿಗೆ ಸಚಿವ ದರ್ಜೆ ಸ್ಥಾನಮಾನ ಸಿಕ್ಕಿದ್ದು ಹೇಗೆ ಎಂಬುದು ಗೊತ್ತಿಲ್ಲ. ಅವರು ಅಧ್ಯಕ್ಷರಾಗಿರುವುದು ನಿಗಮ ಮಂಡಳಿಗಳಿಗಲ್ಲ. ಅದು ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ’ ಎಂದು ತಿಳಿಸಿದ್ದಾರೆ. 

ADVERTISEMENT

‘ಕಳೆದ ಐದು ವರ್ಷಗಳಿಂದ ಮಹಾಮಂಡಳಕ್ಕೆ ಅಧ್ಯಕ್ಷನಾಗಿದ್ದೇನೆ. ಈಗ ಅಧಿಕಾರ ಅವಧಿ ಮುಕ್ತಾಯದ ಹಂತದಲ್ಲಿದೆ. ಸರ್ಕಾರ ನನಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ್ದಕ್ಕೆ ಧನ್ಯವಾದ. ನನಗೆ ಆದೇಶ ಪ್ರತಿ ಕೂಡ ತಲುಪಿದೆʼ ಎಂದು ಭೂಕಾಂತ್ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಡಿ.ಭೂಕಾಂತ್‌ ಸೇರಿದಂತೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ರಾಜ್ಯ ಜವಳಿ ಮೂಲಸೌಲಭ್ಯ ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್‌ ಅವರಿಗೆ ಸಚಿವ ಸ್ಥಾನಮಾನದ ಮನ್ನಣೆ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.