
ಶಿವಮೊಗ್ಗ: ‘ಎರಡು ವರ್ಷಗಳಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ. ಇಲ್ಲಿ ಕೆಲಸ ಮಾಡಿದ್ದು ಅದೃಷ್ಟ’ ಎಂದು ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ಸ್ನೇಹಕೂಟದಲ್ಲಿ ಭಾಗಿಯಾಗಿದ್ದ ಅವರು, ಜಿಲ್ಲೆಯಲ್ಲಿ ಅರಣ್ಯ ಸಂಬಂಧಿ ಸಮಸ್ಯೆಗಳು, ಕಂದಾಯ ದಾಖಲೆ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ, ಶರಾವತಿ ಸಂತ್ರಸ್ತರ ಸಮಸ್ಯೆಗಳು ಸೇರಿದಂತೆ ಸವಾಲಿನ ಕೆಲಸಗಳನ್ನು ಮಾಡಿದ ತೃಪ್ತಿ ಇದೆ ಎಂದರು.
ಇಲ್ಲಿನ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಹೆಚ್ಚಿನ ಬೆಂಬಲವೂ ದೊರೆತಿದೆ. ಜಿಲ್ಲಾಧಿಕಾರಿಯಾಗಿ ಇಲ್ಲಿ ಸಾಕಷ್ಟು ಆಡಳಿತಾತ್ಮಕ ಸಂಗತಿಗಳನ್ನು ಕಲಿತಿದ್ದೇನೆ. ಬಿ.ಎಚ್ ರಸ್ತೆಯ ವಿಸ್ತರಣೆಗೆ ಸಂಬಂಧಿಸಿದಂತೆ 30 ಕಡೆ ಭೂಮಿ ಸ್ವಾಧೀನ ಸಮಸ್ಯೆ ಬಗೆಹರಿಸಿದ ಸಮಾಧಾನವೂ ತಮಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವ್ರಗೊಳ್ಳುತ್ತಿದೆ. ಈಗ ಆರೋಗ್ಯ ಇಲಾಖೆಯ ಆಯುಕ್ತನಾಗಿ ತೆರಳುತ್ತಿದ್ದೇನೆ. ಮಂಗನ ಕಾಯಿಲೆ ಪರಿಹಾರಕ್ಕೆ ಲಸಿಕೆ ಸಿದ್ಧಪಡಿಸುವ ಯೋಜನೆಗೆ ಹೆಚ್ಚಿನ ಗಮನ ನೀಡುತ್ತೇನೆ. ಶಿವಮೊಗ್ಗಕ್ಕೂ ಭೇಟಿ ನೀಡಿ, ಪರಿಣಿತರೊಂದಿಗೆ ಸಮಾಲೋಚಿಸಿ ಕೆಎಫ್‌ಡಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.