
ಶಿವಮೊಗ್ಗ: ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ (55) ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ (34) ಇಲ್ಲಿನ ಅಶ್ವತ್ಥ ನಗರದ ಅವರ ನಿವಾಸದಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿಯ ಡಾ.ನಾಗರಾಜ ಹೊಮ್ಮರಡಿ ಕುಟುಂಬ ನಗರದ ಗಾಂಧಿ ನಗರದಲ್ಲಿ ಹೊಮ್ಮರಡಿ ಆಸ್ಪತ್ರೆಯ ಮೂಲಕ ಹಲವು ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿತ್ತು.
ಮಕ್ಕಳ ತಜ್ಞರಾಗಿದ್ದ ಡಾ.ನಾಗರಾಜ ಹೊಮ್ಮರಡಿ ಕೂಡ 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ರ ಆಕಾಶ್ ಹೊಮ್ಮರಡಿ ಅವರ ಪತ್ನಿ ನವ್ಯಶ್ರೀ ಕೂಡ ಒಂದೂವರೆ ವರ್ಷದ ಹಿಂದೆ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಡಾ.ಜಯಶ್ರೀ ನೆಲ ಮಹಡಿಯ ಕೊಠಡಿಲ್ಲಿ ನೇಣು ಬಿಗಿದುಕೊಂಡಿದ್ದು, ಆಕಾಶ್ ಶವ ಮೊದಲ ಮಹಡಿ ಕೊಠಡಿಯಲ್ಲಿ ಪತ್ತೆಯಾಗಿದೆ. ಆಕಾಶ್ ಅವರಿಗೆ ಕಳೆದ ಮೇ ತಿಂಗಳಲ್ಲಿ ಮತ್ತೊಂದು ಮದುವೆ ಆಗಿತ್ತು. ಆಕಾಶ್ ಪತ್ನಿ ಮತ್ತೊಂದು ಕೊಠಡಿಯಲ್ಲಿ ಇದ್ದರು ಎಂದು ತಿಳಿದುಬಂದಿದೆ.
'ಸೊಸೆ ನವ್ಯಶ್ರೀ ಸಾವಿನಿಂದ ಕುಟುಂಬ ಬೇಸರಕ್ಕೆ ಒಳಗಾಗಿತ್ತು ಎಂಬುದು ಸ್ಥಳದಲ್ಲಿ ದೊರೆತ ಡೆತ್‌ನೋಟ್‌ನಲ್ಲಿ ವ್ಯಕ್ತವಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ವಿನೋಬ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.