ADVERTISEMENT

ಶಿವಮೊಗ್ಗ: ಪಚ್ಚೆ ಹಬ್ಬ; ಇಲ್ಲಿ ಸರ್ಕಾರಿ ಶಾಲೆ ಮಕ್ಕಳ ಕಲರವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 6:58 IST
Last Updated 30 ಏಪ್ರಿಲ್ 2025, 6:58 IST
ಪಚ್ಚೆಹಬ್ಬಕ್ಕೆ ಮಕ್ಕಳಿಂದ ತೋರಣದ ಮೆರುಗು
ಪಚ್ಚೆಹಬ್ಬಕ್ಕೆ ಮಕ್ಕಳಿಂದ ತೋರಣದ ಮೆರುಗು   

ಶಿವಮೊಗ್ಗ: ಊರು ಮುಗಿದು ಕಾನು ಹಾದಿಗೆ ಕಾರು ಹೊರಳಿದರೂ ಹುಡುಕಿ ಹೊರಟಿದ್ದ ಮಕ್ಕಳ ಕಲರವ ಕೇಳಲೇ ಇಲ್ಲ. ಬದಲಿಗೆ ಕಾಡಿನ ದಟ್ಟತೆ ಹೆಚ್ಚುತ್ತಿತ್ತು. ನಾವೇ ಹಾದಿ ತಪ್ಪಿದೆವೋ, ವಾಪಸ್ ಮರಳುವುದೋ ಅಂದುಕೊಳ್ಳುವಾಗಲೇ ರಸ್ತೆ ಪಕ್ಕದ ಕಲ್ಲಿನ ತೋರಿಗೆ ಅಂಟಿಸಿದ್ದ ಪುಟ್ಟ ಬಟ್ಟೆ ಮೇಲೆ ಬರೆದಿದ್ದ ‘ಪಚ್ಚೆಹಬ್ಬ’ಕ್ಕೆ ದಾರಿ ಕಾಣಿಸಿತು. ಅದೇ ದಿಕ್ಕಿನಲ್ಲಿ ಮಣ್ಣಿನ ಕಿರು ಹಾದಿಯಲ್ಲಿ ಫರ್ಲಾಂಗು ದೂರ ಸಾಗುತ್ತಿದ್ದಂತೆಯೇ ಸುತ್ತಲಿನ ಹಸಿರ ದಟ್ಟತೆ ಕರಗಿ ಅಲ್ಲಿ ಮಕ್ಕಳ ಚಿಲಿಪಿಲಿ ಒಡಮೂಡಿತು. 

ಅದು ಸಾಗರ ತಾಲ್ಲೂಕಿನ ಹಳವಗೋಡು ಗ್ರಾಮದ ಬಳಿಯ ಜೇನುಕಟ್ಟೆ ತೋಟ. ಕಳೆದ ನಾಲ್ಕು ವರ್ಷಗಳಿಂದ ಪ್ರತೀ ಬೇಸಿಗೆಯಲ್ಲಿ ಅದು ಮಕ್ಕಳ ಮನೆ ಆಗಿ ಬದಲಾಗುತ್ತದೆ. ಸುತ್ತಲಿನ ಪಡವಗೋಡು, ಲಿಂಗದಹಳ್ಳಿ, ಕೆರೆಗದ್ದೆ, ಮೂಡಳ್ಳಿ, ಬಿಳಿಸಿರಿ, ಹಳವಗೋಡು, ಕಾರೆಗೋಂಡ ಗ್ರಾಮಗಳ ಸರ್ಕಾರಿ ಶಾಲೆಯ 80ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಕಲೆಯುತ್ತಾರೆ. ಒಂದು ವಾರ ಪಚ್ಚೆ ಹಬ್ಬದ ಬೇಸಿಗೆ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಈ ಬಾರಿಯೂ ಏಪ್ರಿಲ್ 17ರಿಂದ 24ರವರೆಗೆ ಅಲ್ಲಿ ಮಕ್ಕಳ ಪರಿಷೆ ನೆರೆದಿತ್ತು.

ಸಾಗರದ ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ವಿ.ಸುರೇಂದ್ರ ಹಾಗೂ ವಿಜಯಶ್ರೀ ದಂಪತಿ ಪ್ರತೀ ರಜೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳನ್ನು ಕಲೆಹಾಕಿ ಅಲ್ಲಿ ಉಚಿತವಾಗಿ ಬೇಸಿಗೆ ಶಿಬಿರ ನಡೆಸುತ್ತಾರೆ. ‘ಪ್ರಜಾವಾಣಿ’ ಜೇನುಕಟ್ಟೆಗೆ ಹೋದಾಗ ಮಕ್ಕಳಿಗೆ ಮಧ್ಯಾಹ್ನದ ಊಟದ ಬಿಡುವು. ಅದು ಅವರ ಪಠ್ಯೇತರ ಚಟುವಟಿಕೆಯನ್ನು ಕಳೆಗಟ್ಟಿಸಿತ್ತು.

ADVERTISEMENT

ಗುಂಪೊಂದು ತೋಟದ ಮನೆಯ ಪಕ್ಕದ ತೋಡಿನ ದಂಡೆಯ ಮರಕ್ಕೆ ಕಲ್ಲು ಹೊಡೆದು ಮಾವಿನಕಾಯಿ ಬೀಳಿಸುವ ಉಮೇದಿಯಲ್ಲಿದ್ದರೆ, ಹೆಣ್ಣುಮಕ್ಕಳ ಗುಂಪು ಅಲ್ಲೇ ತೋಡಿನ ಸೆರಗಿನಲ್ಲಿ ಬಿದ್ದಿದ್ದ ಕಾರೇಹಣ್ಣುಗಳ ಸಂಗ್ರಹಿಸುತ್ತಿತ್ತು. ಮಕ್ಕಳ ಮತ್ತೊಂದು ಬಳಗಕ್ಕೆ ಚಪ್ಪರದ ಕೆಳಗೆ ಚಂಡಾಟದ ಹಿಗ್ಗು. ಮತ್ತೆ ಕೆಲವರಿಗೆ ಚಪ್ಪರದ ನಡುವೆ ಸೈಕಲ್‌ ತುಳಿಯುವ ಉತ್ಸಾಹ...  

ಓಹೋಯ್, ಹೇಹೇಯ್ ಅನ್ನುತ್ತಾ ಚಪ್ಪರದ ಕೆಳಗೆ ಎಲ್ಲ ಮಕ್ಕಳನ್ನು ಕಲೆಹಾಕಿದ ವಿಜಯಶ್ರೀ, ಅವರನ್ನು ಮಧ್ಯಾಹ್ನದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಉಲ್ಲನ್ ಹೆಣೆದು ರೂಪಿಸಿದ್ದ ಕೀಚೈನ್, ವಾಟರ್ ಬಾಟಲ್ ಬ್ಯಾಗ್, ಬುಕ್‌ ಮಾರ್ಕರ್, ಅಲಂಕಾರ ಸಾಮಗ್ರಿ, ಕಿವಿಯೋಲೆ ತೋರಿಸಿದ ಸುಕನ್ಯಾ ಅಕ್ಕ, ಅವುಗಳನ್ನು ಹೆಣೆಯುವ ರೀತಿ ಹೇಳಿಕೊಟ್ಟರು. ಶಿವಮೊಗ್ಗದಿಂದ ಬಂದಿದ್ದ ಕವಿಯತ್ರಿ ಸವಿತಾ ನಾಗಭೂಷಣ್, ಮಕ್ಕಳಿಗೆ ಕಥೆಗಳನ್ನು ಹೇಳಿ ನಂತರ ಪ್ರಶ್ನೋತ್ತರ ನಡೆಸಿ ಸರಿ ಉತ್ತರ ಹೇಳಿದವರಿಗೆ ಪುಸ್ತಕಗಳ ಬಹುಮಾನ ಕೊಟ್ಟರು. ಲೇಖಕಿ ರೇಖಾಂಬ ಹಾಡು ಹೇಳಿಕೊಟ್ಟರೆ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಕಥೆ ಹೇಳಿ ಮಕ್ಕಳನ್ನು ರಂಜಿಸಿದರು.

ಹಾಡು, ಹಸೆ–ಚಿತ್ತಾರ, ಚಿತ್ರ ಬರಹ, ಕಥೆ, ಕುಂಬಾರಿಕೆ, ನಾಟಕ, ನೃತ್ಯ ಹೀಗೆ ಮಕ್ಕಳ ಮನೋವಿಕಾಸಕ್ಕೆ ಅಗತ್ಯವಿರುವ ಎಲ್ಲ ಸಂಗತಿಗಳೂ ಪಚ್ಚೆಹಬ್ಬದಲ್ಲಿ ಮೇಳೈಸಿದ್ದವು. ಸಿಟಿ ಮಕ್ಕಳಿಗೆ ನಾವೇನೂ ಕಮ್ಮಿ ಇಲ್ಲವೆಂಬಂತೆ ಒಂದೇ ಸೂರಿನಡಿ ಕಲೆತು ಕುಣಿದು–ಕುಪ್ಪಳಿಸುವ ಮಕ್ಕಳಿಗೆ ಸ್ವತಃ ಅವರ ಪೋಷಕರೇ ನೆರಳಾಗುತ್ತಾರೆ. ಮಕ್ಕಳನ್ನು ನಿತ್ಯ ಕಳುಹಿಸಲು–ಕರೆತರಲು ಗ್ರಾಮಸ್ಥರೇ ಸೇರಿ ಬಸ್‌ನ ವ್ಯವಸ್ಥೆ ಮಾಡಿದ್ದರು.

ಎಲೆಗಳಲ್ಲಿ ಒಡಮೂಡಿದ ನವಿಲು

ಸುರೇಂದ್ರ–ವಿಜಯಶ್ರೀ ದಂಪತಿಯ ಕಾಳಜಿ..

ಬಿ.ವಿ.ಸುರೇಂದ್ರ ಮೂಲತಃ ಶಿವಮೊಗ್ಗದವರು. ಉಡುಪಿಯ ವಿಜಯಶ್ರೀ ಥಿಯೇಟರ್‌ ಹಿನ್ನೆಲೆಯವರು. ಸಾಗರ ಹಾಗೂ ಧಾರವಾಡದಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಸುರೇಂದ್ರ ಕೃಷಿ ಮಾಡಲು ಹಳವಗೋಡು ಬಳಿ ಜಮೀನು ಖರೀದಿಸಿ ತೋಟ ಮಾಡಿದ್ದಾರೆ. ಅದೇ ಈಗ ದಂಪತಿಯ ಕೈಂಕರ್ಯಕ್ಕೆ ವೇದಿಕೆ ಆಗಿದೆ. ‘ಪಠ್ಯಕ್ರಮ ಅಕಾಡೆಮಿಕ್‌ ಚೌಕಟ್ಟಿನ ಹೊರತಾಗಿ ಕಲಿಕೆಯ ಸಾಧ್ಯತೆಗಳನ್ನು ಅವಿಷ್ಕರಿಸಿ ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದೇವೆ. ಕುಟುಂಬದ ಸದಸ್ಯರು ಹಾಗೂ ಕೆಲವು ಸ್ನೇಹಿತರು ದೇಣಿಗೆ ಕೊಟ್ಟು ಶಿಬಿರಕ್ಕೆ ಆಸರೆಯಾಗಿ ನಿಲ್ಲುತ್ತಾರೆ’ ಎಂದು ಸುರೇಂದ್ರ ಹೇಳುತ್ತಾರೆ. ಸುತ್ತಲಿನ 10 ಕಿ.ಮೀ ವ್ಯಾಪ್ತಿಯ ಹಳ್ಳಿಗಳಿಂದ ಬರುವ ಮಕ್ಕಳು ಶಿಬಿರದಲ್ಲಿ ಕಲೆಯುತ್ತಾರೆ. ಮಕ್ಕಳು ಮಧ್ಯಾಹ್ನದ ಬುತ್ತಿ ತಂದರೆ ಸಂಘಟಕರು ಜ್ಯೂಸ್ ಕಷಾಯ ಹಣ್ಣು–ಹಂಪಲು ತಿನಿಸುಗಳ ಕೊಡುತ್ತಾರೆ. ನೀನಾಸಂ ರಂಗಾಯಣ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳ ಕರೆಯಿಸಿ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಸುರೇಂದ್ರ ಸಂಘಟಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.