ಶಿವಮೊಗ್ಗ: ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬಾರದು. ಬಹುರಾಷ್ಟ್ರೀಯ (ಎಂಎನ್‌ಸಿ) ಹಾಗೂ ಕಾರ್ಪೊರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಲ್ಲಿ ಹೈನುಗಾರಿಕೆ, ತರಕಾರಿ, ಹಣ್ಣುಗಳು ಸೇರಿದಂತೆ ಸಂಸ್ಕರಿಸಿದ ಆಹಾರಗಳ ಆಮದು ಹೆಚ್ಚುತ್ತದೆ. ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ರೈತರ ಗಳಿಕೆ ಕಡಿಮೆಯಾಗುತ್ತದೆ. ಕುಲಾಂತರಿ ಬೆಳೆಗಳ ಹಾವಳಿ ಹೆಚ್ಚಾಗಿ ದೇಶದ ಸಾರ್ವಭೌಮತ್ವದ ಮೇಲೆ ಗಂಭೀರ ಆಕ್ರಮಣ ನಡೆಯಲಿದೆ ಎಂದು ದೂರಿದರು.
ರೈತರ ಸಾಲಮನ್ನಾ ನೀತಿ ಜಾರಿ ಮಾಡಬೇಕು. ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ ತಡೆಗಟ್ಟಬೇಕು. ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಬಾರದು. 10 ವರ್ಷ ಹಳೆಯ ಡೀಸೆಲ್ ಟ್ರ್ಯಾಕ್ಟರ್‌ಗಳ ನಿಷೇಧಿಸಬಾರದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಬಲಪಡಿಸಬೇಕು. ಕೋಮುವಾದಿ ಚಟುವಟಿಕೆ ನಿಲ್ಲಬೇಕು. ರೈತರಿಗೂ ಪಿಂಚಣಿ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರೈತಸಂಘದ ಮುಖಂಡರಾದ ಹಾಲೇಶಪ್ಪ, ಅಶೋಕ್, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಭಾಗ್ಯ ರಾಘವೇಂದ್ರ, ಇ.ಬಿ. ಜಗದೀಶ್, ಕೆ. ರಾಘವೇಂದ್ರ, ಹನುಮಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.