ADVERTISEMENT

ಶಿವಮೊಗ್ಗ | ಯಕೃತ್ತಿನಲ್ಲಿ ಸಮಸ್ಯೆ: ಮುಂಬೈಗೆ ಯುವತಿ ಏರ್ ಲಿಫ್ಟ್

‘ಝಿರೋ ಟ್ರಾಫಿಕ್‌’ ಸೌಲಭ್ಯ ಕಲ್ಪಿಸಿದ ಪೊಲೀಸ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 18:35 IST
Last Updated 26 ಜುಲೈ 2025, 18:35 IST
‘ಝಿರೋ ಟ್ರಾಫಿಕ್‌’ ಸೌಲಭ್ಯ ಕಲ್ಪಿಸಿ ಯುವತಿಯನ್ನು ಆಂಬುಲೆನ್ಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು
‘ಝಿರೋ ಟ್ರಾಫಿಕ್‌’ ಸೌಲಭ್ಯ ಕಲ್ಪಿಸಿ ಯುವತಿಯನ್ನು ಆಂಬುಲೆನ್ಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು   

ಶಿವಮೊಗ್ಗ: ‘ಡೆಂಗಿಗೆ ಚಿಕಿತ್ಸೆ ಪಡೆಯುತ್ತಿದ್ದ ಯುವತಿಗೆ ಯಕೃತ್ತಿನಲ್ಲಿ (ಲಿವರ್‌) ಗಂಭೀರ ಸಮಸ್ಯೆ ಇರುವುದು ತಪಾಸಣೆ ವೇಳೆ ಪತ್ತೆಯಾದ ಕಾರಣ ಇಲ್ಲಿನ ನಂಜಪ್ಪ ಆಸ್ಪತ್ರೆ ವೈದ್ಯರ ತಂಡವು ತುರ್ತು ಚಿಕಿತ್ಸೆಗಾಗಿ ಶನಿವಾರ ಮುಂಬೈನ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ಸಾಗಿಸಿತು.

ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯಿಂದ ಸೋಗಾನೆ ವಿಮಾನ ನಿಲ್ದಾಣಕ್ಕೆ ‘ಝಿರೋ ಟ್ರಾಫಿಕ್‌’ ಸೌಲಭ್ಯ ಕಲ್ಪಿಸಿದ ಪೊಲೀಸರು ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು.

‘ಗಾಂಧಿ ಬಜಾರ್‌ ನಿವಾಸಿ ಮನೋಜ್ ಅವರ ಪುತ್ರಿ ಮಾನ್ಯಾ ಜೈನ್ (21) ಅವರೇ ಮುಂಬೈಗೆ ತೆರಳಿದ ಯುವತಿ. ಡೆಂಗಿಯಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗದ್ದರಿಂದ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಲಿವರ್‌ನಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ.

ADVERTISEMENT

‘ಏಳು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆದಿದ್ದು, ಡೆಂಗಿ ದೃಢಪಟ್ಟಿತ್ತು. ಶುಕ್ರವಾರ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದು, ರಕ್ತ ಪರೀಕ್ಷೆಯಲ್ಲಿ ಯಕೃತ್ತು (ಲಿವರ್‌) ಸಮಸ್ಯೆ ಇರುವುದು ಕಂಡುಬಂದಿದೆ. ಡೆಂಗಿ ಕಾಣಿಸಿಕೊಂಡಾಗ ಶೇ 1ರಷ್ಟು ಪ್ರಕರಣಗಳಲ್ಲಿ ಲಿವರ್‌ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಇದರಿಂದ, ಬಹು ಅಂಗಾಂಗ ವೈಫಲ್ಯವಾಗುವ ಸಾಧ್ಯತೆಯೂ ಇತ್ತು. ಹಾಗಾಗಿ ತುರ್ತು ಚಿಕಿತ್ಸೆಗಾಗಿ ಮುಂಬೈಗೆ ಕಳುಹಿಸಲಾಗಿದೆ’ ಎಂದು ನಂಜಪ್ಪ ಆಸ್ಪತ್ರೆಯ ತಜ್ಞ ವೈದ್ಯ ಡಾ.ರಾಕೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.