ADVERTISEMENT

ಶಿವಮೊಗ್ಗ: ಸವಾಲುಗಳ ನಡುವೆ ಆರೋಗ್ಯ ಇಲಾಖೆ ನೌಕರರ ಕೆಲಸ

ಜಿಲ್ಲಾ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಜೆ.ಶಶಿಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:06 IST
Last Updated 11 ಫೆಬ್ರುವರಿ 2026, 6:06 IST
ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ತಾಲ್ಲೂಕು ಪದಾಧಿಕಾರಿಗಳ ಸಮಾವೇಶದ ಉದ್ಘಾಟನೆಯ ನೋಟ
ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ತಾಲ್ಲೂಕು ಪದಾಧಿಕಾರಿಗಳ ಸಮಾವೇಶದ ಉದ್ಘಾಟನೆಯ ನೋಟ   

ಸಾಗರ: ‘ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಅನೇಕ ಸವಾಲುಗಳ ನಡುವೆ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಜೆ.ಶಶಿಕುಮಾರ್ ತಿಳಿಸಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ತಾಲ್ಲೂಕು ಪದಾಧಿಕಾರಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತರೆ ಇಲಾಖೆಗಳಿಗಿಂತ ಆರೋಗ್ಯ ಇಲಾಖೆ ಭಿನ್ನವಾಗಿದೆ. ಅದಕ್ಕೆ ಹೆಚ್ಚಿನ ಕಾರ್ಯ ಒತ್ತಡ ಇರುತ್ತದೆ. ಆದರೆ ಇತರೆ ಇಲಾಖೆಗಳಿಗಿಂತ ವೈದ್ಯ ಸಿಬ್ಬಂದಿಯ ಮೇಲೆ ಸವಾರಿ ಮಾಡುವ ಕೆಲಸ ಸಹ ಮೇಲ್ಮಟ್ಟದಲ್ಲಿ ನಡೆಯುತ್ತಿದೆ. ಇತರೆ ಇಲಾಖೆ ನೌಕರರ ಸಂಘಟನೆಗಳು ಸದೃಢವಾಗಿದ್ದು ವಾರ್ಷಿಕ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತದೆ. ಆದರೆ ನಮ್ಮ ಸಂಘಟನೆಗಳಲ್ಲಿ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಘದಿಂದ ನೌಕರರನ್ನು ಒಗ್ಗೂಡಿಸುವ, ಅವರಿಗೆ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಡಾ. ನಾಗೇಂದ್ರಪ್ಪ, ಇಲಾಖೆ ಸಂಘವನ್ನು ಪ್ರತಿನಿಧಿಸುವ ನೌಕರರು ಸಂಘಟನೆಯಿಂದ ಇದ್ದಾಗ ಮಾತ್ರ ನಮ್ಮ ಹಕ್ಕುಗಳ ಪಡೆಯಲು ಸಾಧ್ಯವಿದೆ. ವೈದ್ಯರ ಮೇಲೆ ಸಾಕಷ್ಟು ಒತ್ತಡ ಇರುತ್ತದೆ. ಇದನ್ನು ಸಮರ್ಥವಾಗಿ ಎದುರಿಸಲು ಸಂಘಟನೆಗಳ ಸಹಕಾರ ಅಗತ್ಯ ಎಂದು ತಿಳಿಸಿದರು.

ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ‘ಆರೋಗ್ಯ ಇಲಾಖೆಯನ್ನು ಕೇವಲವಾಗಿ ಪರಿಗಣಿಸುವುದು ಬೇಡ. ನಮ್ಮ ಮೇಲೆ ಸವಾರಿ ಮಾಡಿದರೆ ಸಹಿಸಿಕೊಂಡಿರಲು ಸಾಧ್ಯವಿಲ್ಲ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ, ನೌಕರರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಸರ್ಕಾರದ ಪ್ರಶಸ್ತಿ ಪುರಸ್ಕಾರ ಘೋಷಣೆ ಸಂದರ್ಭದಲ್ಲಿ ಸಹ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಅಹರ್ನಿಶಿ ದುಡಿಯುವ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಗೌರವದಿಂದ ನೋಡುವ ವಾತಾವರಣ ಸೃಷ್ಟಿಯಾಗಬೇಕು’ ಎಂದರು.

ಡಾ. ಗುಡದಪ್ಪ ಕಸವಿ., ಲೋಹಿತ್, ಸತೀಶ್ ಶೆಟ್ಟಿ ತೀರ್ಥಹಳ್ಳಿ, ವಿಜಯಮ್ಮ, ನಾಗರಾಜ್ ಸೊರಬ, ಸುರೇಶ್ ಶಿಕಾರಿಪುರ, ಸಹದೇವ್, ರವಿ, ಮಂಜುನಾಥ್, ಸವಿತಾ, ಸಹದೇವರ ಬಡಿಗೇರ್, ನರಸಿಂಹ, ಪುಷ್ಪಾ ಹಾಜರಿದ್ದರು.