ಶಿವಮೊಗ್ಗ: ಇಲ್ಲಿನ ಭೀಮೇಶ್ವರ ಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಶನಿವಾರ ಆರಂಭಗೊಂಡಿದೆ.
ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಎಂ.ಶ್ರೀಕಾಂತ್, ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಜಾನಪದ ಕಲಾ ಮೇಳ, ಹುಲಿವೇಷಧಾರಿಗಳ ಸುಮಾರು ಗಣಪತಿಯ ಮೂರ್ತಿಯ ಮೆರವಣಿಗೆ ಆರಂಭಗೊಂಡಿದ್ದು ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಆಗಮಿಸಿದೆ. ಸಮ್ಮುಖದಲ್ಲಿ ಹೊರಟ ಮೆರವಣಿಗೆಯಲ್ಲಿ ಡೊಳ್ಳು ನೃತ್ಯ, ಕೀಲುಗೊಂಬೆ ಹಾಗೂ ಮಂಗಳವಾದ್ಯ ಸಾಥ್ ನೀಡಿವೆ.
ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕೇಸರಿ ಬಾವುಟ, ಪುರಾಣ, ಮಹಾಭಾರತ, ರಾಮಾಯಣದ ಪ್ರಸಂಗಗಳು ಹಾಗೂ ದೇವರ ಚಿತ್ರಗಳೊಂದಿಗೆ ಅಲಂಕೃತಗೊಂಡಿದೆ. ಕೇಸರಿ ಟೋಪಿ ಹಾಗೂ ಶಾಲು ಧರಿಸಿದ ಗಣಪತಿಯ ಭಕ್ತರು ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಆಗಾಗ ಮಳೆಯ ಸಿಂಚನವೂ ಆಗುತ್ತಿದೆ.
ಗಣಪತಿ ಮೆರವಣಿಗೆ ಸ್ವಾಗತಿಸಲು ಶಿವಮೊಗ್ಗದ ಪ್ರಮುಖ ರಸ್ತೆಗಳನ್ನು ಹೂವು, ರಂಗೋಲಿಗಳಿಂದ ಅಲಂಕರಿಸಲಾಗಿದೆ. ಧ್ವನಿವರ್ಧಕಗಳ ಅಳವಡಿಸಲಾಗಿದೆ.
ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅನ್ನ ಸಂತರ್ಪಣೆ ವ್ಯವಸ್ಥೆಗ ಮಾಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಬಹಳ ಪ್ರಸಾದ ವಿತರಣೆಯಲ್ಲಿ ತೊಡಗಿವೆ.
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರದೊಳಗೆ ಸಂಚಾರ ವ್ಯವಸ್ಥೆಯ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.