ADVERTISEMENT

ಶಿವಮೊಗ್ಗ: ಗದ್ದುಗೆಯಲ್ಲಿ ಕೋಟೆ ಮಾರಿಕಾಂಬೆ ಪ್ರತಿಷ್ಠಾಪನೆ- ಹರಕೆ ಸಮರ್ಪಣೆ

ಎರಡನೇ ದಿನದ ಜಾತ್ರಾ ಮಹೋತ್ಸವ: ಹರಕೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 4:35 IST
Last Updated 26 ಫೆಬ್ರುವರಿ 2026, 4:35 IST
ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಬುಧವಾರ ಕೋಟೆ ಮಾರಿಕಾಂಬಾ ದೇವಿಗೆ ಭಕ್ತರು ಹರಕೆ ಸಲ್ಲಿಸಿದರು
ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಬುಧವಾರ ಕೋಟೆ ಮಾರಿಕಾಂಬಾ ದೇವಿಗೆ ಭಕ್ತರು ಹರಕೆ ಸಲ್ಲಿಸಿದರು   

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಎರಡನೇ ದಿನವಾದ ಬುಧವಾರ ಮುಂಜಾನೆ 4 ಗಂಟೆಗೆ ದೇವಿಯನ್ನು ಗಾಂಧಿ ಬಜಾರಿನ ತವರುಮನೆಯಿಂದ ಕೋಟೆ ರಸ್ತೆಯ ಗದ್ದುಗೆಗೆ ಗಂಗಾಪೂಜೆಯೊಂದಿಗೆ ಮಂಗಳವಾದ್ಯದೊಂದಿಗೆ ಎದುರುಗೊಳ್ಳಲಾಯಿತು. ನಂತರ ಮೆರವಣಿಗೆಯಲ್ಲಿ ಕೊಂಡೊಯ್ದು ಕೋಟೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ನಂತರ ಭಕ್ತರು ಬೇವಿನುಡಿಗೆಯಲ್ಲಿ ಬಂದು ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ಬಳಿಕ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯ ಸಲ್ಲಿಸಿದರು. ಬೆಳಿಗ್ಗೆ 6ರಿಂದ 10ರವರೆಗೆ ವಾಲ್ಮೀಕಿ ಸಮಾಜದವರು, ನಂತರ ಸಂಜೆ 4ರವರೆಗೆ ಉಪ್ಪಾರ ಸಮಾಜದವರು, ಸಂಜೆ 4ರಿಂದ ರಾತ್ರಿ 10.30ರವರೆಗೆ ಮಡಿವಾಳ ಸಮಾಜದವರು ಗದ್ದುಗೆಯಲ್ಲಿ ದೇವಿಗೆ ಪೂಜೆ ಸಲ್ಲಿಸಿದರು. ಇದು ನಾಲ್ಕು ದಿನಗಳ ಕಾಲವೂ ಸರದಿಯಂತೆ ನಡೆಯಲಿದೆ.

ಮಾರಿಕಾಂಬ ದೇವಾಲಯದ ಸುತ್ತಲೂ ಭಕ್ತರಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದರ್ಶನಕ್ಕೆ ₹500 ಮೊತ್ತದ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುತ್ತಲೂ ನೂರಾರು ಮಳಿಗೆಗಳು ಜಾತ್ರೆಯ ಸಂಭ್ರಮಕ್ಕೆ ಮೆರುಗು ನೀಡಿದ್ದವು. ತಮ್ಮ ಹರಕೆ ತೀರಿಸಲು ಕೋಳಿ, ಕುರಿ ಅರ್ಪಣೆ ಮಾಡಿದರು. ಬೇವಿನ ಉಡುಗೆಯನ್ನು ತೊಟ್ಟ ಭಕ್ತರು ಹರಕೆ ತೀರಿಸಿದರು. ಸುತ್ತಮುತ್ತಲ ಹಳ್ಳಿಯ ಸಾವಿರಾರು ಜನರು ಬಂದು, ದೇವಿಯ ದರ್ಶನ ಪಡೆದರು.

ADVERTISEMENT

ದೇವಿಯ ಮಡಿಲಲ್ಲಿ ಪುಟ್ಟ ಮಕ್ಕಳನ್ನು ಕೂರಿಸಿ ಹರಕೆ ತೀರಿಸುವ ಸಂಪ್ರದಾಯ ಕೂಡ ಚಾಲ್ತಿಯಲ್ಲಿದ್ದು, ಪೋಷಕರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಸೀರೆ, ಮಡಿಲಕ್ಕಿ ಸಮರ್ಪಣೆ ವಿಶೇಷವಾಗಿ ನಡೆಯಿತು. ಭಕ್ತರಿಗೆ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಮಸಾಲೆ ಮಜ್ಜಿಗೆ ವಿತರಿಸಿದರು. ಹಲವು ಸಂಘ– ಸಂಸ್ಥೆಗಳು ಬೆಳಿಗ್ಗೆಯಿಂದಲೇ ನಿರಂತರವಾಗಿ ಮಜ್ಜಿಗೆ ಮತ್ತು ಪಾನಕ ಹಂಚಿಕದರು. ಹಣ್ಣು– ಕಾಯಿ ಮಾಡಿಸಿಕೊಂಡು ಬಳಿಕ ದೇವಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬಳೆ ಅಂಗಡಿಗಳು ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು. ಈ ಹಬ್ಬದಲ್ಲಿ ಹಸಿರು ಬಳೆ ಪಡೆದು ಧರಿಸಿದ್ದರು.

ನಗರದ ಹಲವು ಮನೆಗಳಲ್ಲಿ ಶಾಮಿಯಾನ ಹಾಕಿ ನೆಂಟರಿಷ್ಟರಿಗೆ ಆಹ್ವಾನಿಸಿ ಜಾತ್ರೆಯ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಹಣ್ಣು ಮತ್ತು ಹೂಗಳ ವಿಶೇಷ ಅಲಂಕಾರ ಊರ– ಪರ ಊರ ಭಕ್ತರ ಪ್ರಶಂಸೆಗೆ ಪಾತ್ರವಾಯಿತು. ಈ ಅಲಂಕಾರದ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.