ಶಿಕಾರಿಪುರ: ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರ ತೆರವಿಗೆ ಒತ್ತಾಯಿಸಿ ಅ.9ರಂದು ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣ ಬಂದ್ ಕರೆ ನೀಡಲಾಗಿದೆ.
ಒಂದು ರಸ್ತೆ ಎರಡು ಟೋಲ್: ಶಿವಮೊಗ್ಗ, ಶಿಕಾರಿಪುರ ಆನವಟ್ಟಿ, ಹಾನಗಲ್ ರಾಜ್ಯ ಹೆದ್ದಾರಿಯನ್ನು ಕೆಶಿಪ್ ಅಡಿಯಲ್ಲಿ 2017ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯಲ್ಲಿ ಶಿವಮೊಗ್ಗದಿಂದ 21 ಕಿ.ಮೀ. ದೂರದ ಕಲ್ಲಾಪುರ ಬಳಿ ಟೋಲ್ ನಿರ್ಮಿಸಲಾಗಿದೆ. ಅಲ್ಲಿಂದ 35 ಕಿ.ಮೀ. ದೂರದ ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿ ಬಳಿ ಮತ್ತೊಂದು ಟೋಲ್ ನಿರ್ಮಿಸಲಾಗಿದ್ದು, 56 ಕಿ.ಮೀ. ಅಂತರದಲ್ಲಿ ಎರಡು ಟೋಲ್‌ಗಳನ್ನು ನಿರ್ಮಿಸಿದಂತಾಗಿದೆ. 60 ಕಿ.ಮೀ. ಅಂತರಕ್ಕೆ ಒಂದು ಟೋಲ್ ನಿರ್ಮಿಸಬೇಕು ಎನ್ನುವುದು ನಿಯಮ. ಎರಡೂ ಟೋಲ್‌ಗಳು ಅವೈಜ್ಞಾನಿಕ ಎನ್ನುವುದು ಜನರ ಆರೋಪ.
ದುಪ್ಪಟ್ಟು ವಸೂಲಿ: ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹ ನಿಯಮ 4ರ ಪ್ರಕಾರ ಕಿ.ಮೀ.ಗೆ ₹0.65 ಶುಲ್ಕ ಪಡೆಯಬೇಕು. ಅಂದರೆ ಕಾರು, ಜೀಪ್‌ಗೆ ₹39 ಪಡೆಯುವ ಜಾಗದಲ್ಲಿ ₹70 ಪಡೆಯಲಾಗುತ್ತಿದೆ. ಬಸ್, ಲಾರಿಗಳಿಂದಲೂ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ ಎಂದು ಖಾಸಗಿ ಬಸ್ ನಿರ್ವಾಹಕ ಯಲ್ಲೋಜಿರಾವ್ ಆರೋಪಿಸುತ್ತಾರೆ.
ರೈತರು ಹೈರಾಣ: ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳ ರೈತರು ಪಟ್ಟಣಕ್ಕೆ ಆಗಮಿಸಬೇಕು ಎಂದರೆ ಟೋಲ್ ಪ್ಲಾಜಾ ದಾಟಿಯೇ ಬರಬೇಕು. ಪಟ್ಟಣದಲ್ಲಿ ಶನಿವಾರ ಸಂತೆ ಮತ್ತು ಭಾನುವಾರ ನಡೆಯುವ ಶಿರಾಳಕೊಪ್ಪ ಸಂತೆಗೆ ತೆರಳುವ ರೈತರು ತರಕಾರಿ ಹಾಗೂ ಕೃಷಿ ಉತ್ಪನ್ನ ಸಾಗಿಸುವುದಕ್ಕೆ ಇದೇ ರಸ್ತೆಯನ್ನು ಬಳಸಬೇಕಿದೆ. ವಾಹನ ಬಾಡಿಗೆ ಜೊತೆ ಟೋಲ್ ಶುಲ್ಕ ಪಾವತಿ ಹೊರೆಯಾಗುತ್ತಿದೆ. ಪಟ್ಟಣದ ಸಾಕಷ್ಟು ರೈತರ ಜಮೀನುಗಳು ಟೋಲ್ ಪ್ಲಾಜಾ ನಂತರದ ಕಣಿವೆಮನೆ ಪ್ರದೇಶದಲ್ಲಿದ್ದು ಅವರು ಹುಲ್ಲು, ಔಷಧಿ, ಗೊಬ್ಬರ ತರಲು ಕಾರು ಅಥವಾ ಗೂಡ್ಸ್ ವಾಹನದಲ್ಲಿ ಹೋಗುತ್ತಾರೆ. ಅವರೆಲ್ಲರೂ ಕೇವಲ 7ರಿಂದ 10 ಕಿ.ಮೀ. ರಸ್ತೆ ಬಳಕೆಗೆ ಶುಲ್ಕ ಕಟ್ಟುವ ಅನಿವಾರ್ಯತೆ ನಿರ್ಮಾಣವಾಗಿದೆ.
ಒಂದು ಜಿಲ್ಲೆ ಎರಡು ಟೋಲ್: ಜಿಲ್ಲೆಯ ಶಿರಾಳಕೊಪ್ಪ-ಸೊರಬ-ಆನವಟ್ಟಿ ಭಾಗದ ರೋಗಿಗಳು ಸರ್ಕಾರಿ ಜಿಲ್ಲಾ ಮಟ್ಟದ ಆಸ್ಪತ್ರೆ, ಖಾಸಗಿ ಆಸ್ಪತ್ರೆಗೆ ನಿತ್ಯ ತೆರಳುತ್ತಾರೆ. ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ ಸೇರಿ ಹಲವು ಕೆಲಸಗಳಿಗೆ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ತೆರಳುವವರು ಕುಟ್ರಳ್ಳಿ ಮತ್ತು ಕಲ್ಲಾಪುರ ಎರಡು ಕಡೆ ಟೋಲ್ ಕಟ್ಟುವ ಸಂಕಷ್ಟ ಅನುಭವಿಸುತ್ತಿದ್ದಾರೆ.
ಪರ ವಿರೋಧ: ಟೋಲ್ ಸಂಗ್ರಹ ಆರಂಭಿಸುವುದಕ್ಕೆ ಬಿಜೆಪಿ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಜನಪ್ರತಿನಿಧಿಗಳು ಆರೋಪಿಸಿದರೆ, ರಸ್ತೆ ನಿರ್ಮಿಸಿದ್ದು ಬಿಜೆಪಿ ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಟೋಲ್ ಸಂಗ್ರಹ ಕೇಂದ್ರ ಆರಂಭಿಸಿದೆ ಎಂದು ಬಿಜೆಪಿ ಜನಪ್ರತಿನಿಧಿಗಳು ಪ್ರತ್ಯಾರೋಪ ಮಾಡುತ್ತಾರೆ. ಟೋಲ್ ವಿರೋಧಿ ಹೋರಾಟಕ್ಕೆ ಎರಡೂ ಪಕ್ಷಗಳು ಬೆಂಬಲ ನೀಡಿದರೂ ಟೋಲ್ ಸಂಗ್ರಹಕ್ಕೆ ಮತ್ತೊಮ್ಮೆ ಕಳೆದ ಆಗಸ್ಟ್‌ನಲ್ಲಿ ಟೆಂಡರ್ ಆಗಿದೆ ಎಂದು ಈಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ವಿನಯ್ ಪಾಟೀಲ್ ಆರೋಪಿಸುತ್ತಾರೆ.
ಜನರ ಹೋರಾಟ: ಟೋಲ್ ತೆರವಿಗೆ ಆಗ್ರಹಿಸಿ ತಾಲ್ಲೂಕಿನಲ್ಲಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಕಳೆದ ಒಂದು ವರ್ಷದಿಂದ ನಿರಂತರವಾಗಿ ಸಚಿವರಿಗೆ, ಜಿಲ್ಲಾಧಿಕಾರಿಗೆ, ಶಾಸಕರಿಗೆ, ಸಂಸದರಿಗೆ ಮನವಿ ನೀಡಿದೆ. ರಸ್ತೆ ತಡೆ, ಟೋಲ್ ಎದುರು ಪ್ರತಿಭಟನೆ ನಡೆದಿದ್ದು ಇದೀಗ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.
ಕುಟ್ರಳ್ಳಿ ಟೋಲ್ ತೆರವುಗೊಳಿಸಬೇಕು. ಇಲ್ಲಿ ಸರ್ವೀಸ್ ರಸ್ತೆ ಇಲ್ಲ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯವಿಲ್ಲ. ಜನಸಾಮಾನ್ಯರ ರಕ್ತ ಹೀರುವ ಕೆಲಸ ಆಗುತ್ತಿದೆ. ಜನರೇ ಟೋಲ್ ಕಿತ್ತುಹಾಕುವ ಮೊದಲು ಸರ್ಕಾರವೇ ಮುಚ್ಚಬೇಕು.– ಶಿವರಾಜ್, ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.