
ಶಿವಮೊಗ್ಗ: ಬೆಂಗಳೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ನಡುವೆ, ಮಾಚೇನಹಳ್ಳಿ ಶಿಮುಲ್ ಡೈರಿ ಎದುರು ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ ವಾಹನಗಳು ಮುಂದೆ ಹೋಗಲು ಸಾಧ್ಯವಾಗದೆ, ಹಿಂದಕ್ಕೆ ತಿರುಗಲೂ ಆಗದೆ ಭಾರೀ ಸಂಚಾರ ಅಸ್ತವ್ಯಸ್ತ ಉಂಟಾಗಿದೆ.
ಈ ಪ್ರದೇಶದಲ್ಲಿ ಒಂದೇ ಭಾಗದಲ್ಲಿ ಸರ್ವೀಸ್ ರಸ್ತೆ ಲಭ್ಯವಿದ್ದು, ಅಲ್ಲಿ ಪದೇಪದೇ ಭೂಕುಸಿತ ಸಂಭವಿಸುತ್ತಿದೆ. ಇನ್ನೊಂದು ಭಾಗದ ಸರ್ವೀಸ್ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದ ಕಾರಣದಿಂದ ಇನ್ನೂ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಈ ಭಾಗದಲ್ಲಿಯೂ ಭೂಕುಸಿತ ಉಂಟಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಒಂದು ಭಾಗದ ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಮತ್ತೊಂದು ಕೆಲಸ ಕೈಗೊಳ್ಳುತ್ತಿರುವುದೇ ಈ ಅವಘಡಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಸಂಚರಿಸುವ ಬಹುಪಾಲು ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಿರುವುದರಿಂದ ಇಲ್ಲಿ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಈ ಅಂಡರ್‌ಪಾಸ್ ಕಾಮಗಾರಿ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡಿದ್ದರೂ ಇದುವರೆಗೆ ಪೂರ್ಣಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ಮಳೆಗಾಲದೊಳಗೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ವಾಹನ ಸವಾರರು ತಿಳಿಸಿದ್ದಾರೆ.
ಈ ಹಿಂದೆ ಶಿಮುಲ್ ಡೈರಿ ಎದುರು ಭೂಕುಸಿತ ಸಂಭವಿಸಿ ಕಲ್ಲು-ಮಣ್ಣು ತುಂಬಿ ತಾತ್ಕಾಲಿಕವಾಗಿ ಬಿಗಿ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಭೂಕುಸಿತ ಸಂಭವಿಸಿರುವುದರಿಂದ ದೊಡ್ಡ ವಾಹನಗಳು ಬಂದಾಗ ಎದುರಿನಿಂದ ವಾಹನಗಳು ಮುಂದೆ ಸಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ವರ್ಷಗಳಿಂದ ವಿಳಂಬವಾಗುತ್ತಿರುವ ಈ ಕಾಮಗಾರಿಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.