ADVERTISEMENT

ಸಿಮ್ಸ್‌ ಗುತ್ತಿಗೆ ಸಿಬ್ಬಂದಿ ಕಾಯಂಗೆ ವಿಶೇಷ ನಿಯಮ: ಸಂಸದ ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 10:39 IST
Last Updated 17 ಜುಲೈ 2021, 10:39 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ವೈದ್ಯಕೀಯ ಕಾಲೇಜಿನಲ್ಲಿ (ಸಿಮ್ಸ್‌) 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕಾಯಂಗೊಳಿಸಲು ವಿಶೇಷ ನೇಮಕಾತಿ ನಿಯಮ ರೂಪಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ₹ 3 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗುವುದು. ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಸುಮಾರು ₹ 15 ಕೋಟಿ ವೆಚ್ಚದಲ್ಲಿ ಕಲಾ ಕಾಲೇಜು, ವಿದ್ಯಾರ್ಥಿನಿಲಯ, ಕಟ್ಟಡ ದುರಸ್ತಿ ಮಾಡಲಾಗುವುದು. ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ಧಿಗೆ ₹ 12 ಕೋಟಿ ನೀಡಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಅನುದಾನದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಸೇರಿದಂತೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜು.13ರಂದು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಹಲವು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಅನುದಾನವೂ ಬಿಡುಗಡೆಯಾಗಿದೆ. ನೀಲನಕ್ಷೆಯೂ ಸಿದ್ಧವಾಗಿದೆ ಎಂದು ವಿವರ ನೀಡಿದರು.

ADVERTISEMENT

ಸಾಗರ ತಾಲ್ಲೂಕಿನ ಇರುವಕ್ಕಿಯ 750 ಎಕರೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ₹ 290 ಕೋಟಿ ವೆಚ್ಚದಲ್ಲಿ ಸಿದ್ಧವಾಗಿದೆ. ಕ್ಯಾಂಪಸ್‌ಗೆ ಅಗತ್ಯವಿರುವ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಸಿಬ್ಬಂದಿ ನೇಮಕ, ಸ್ನಾತಕೋತರ ವಿಭಾಗ, ಸಂಶೋಧನಾ ಕೇಂದ್ರಗಳು ಸ್ಥಾಪಿತವಾಗಿವೆ ಎಂದರು.

ಶಿವಮೊಗ್ಗ, ಶಿಕಾರಿಪುರ, ಆನವಟ್ಟಿ ರಸ್ತೆಯ ವೈಜ್ಞಾನಿಕ ಅಭಿವೃದ್ಧಿ ಹಾಗೂ ಭೂ ಸ್ವಾಧೀನಕ್ಕಾಗಿ ₹ 29.53 ಕೋಟಿ ಬಿಡುಗಡೆಯಾಗಿದೆ. ಶಿವಮೊಗ್ಗದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲು ಮುಖ್ಯಮಂತ್ರಿ ಕ್ರಮ ಕೈಗೊಂಡಿರುವುದು ಸ್ವಾಗತದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಸಂಸದರ ಅನುದಾನದಲ್ಲಿ ಕೋವಿಡ್ ಸಂಕಷ್ಟದ ನೆರವಿಗಾಗಿ ₹ 75 ಲಕ್ಷ ಮೌಲ್ಯದ ಮೂರು ಸುಸಜ್ಜಿತ ಆಂಬ್ಯುಲೆನ್ಸ್‌ಗಳನ್ನು ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಮೇಯರ್ ಸುನಿತಾ ಅಣ್ಣಪ್ಪ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ದತ್ತಾತ್ರಿ, ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್, ‘ಕಾಡಾ’ ಅಧ್ಯಕ್ಷೆ ಪವಿತ್ರ ರಾಮಯ್ಯ, ಮುಖಂಡರಾದ ಬಿ.ಕೆ.ಶ್ರೀನಾಥ್, ಪ್ರಭಾಕರ್, ಕೆ.ವಿ.ಅಣ್ಣಪ್ಪ, ಮಾಲತೇಶ್, ಶಿವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.