ADVERTISEMENT

ಕಾರ್ಮಿಕರ ಕನಿಷ್ಠ ವೇತನ; ಪರಿಷ್ಕೃತ ದರಗಳಿಗೆ ಆಕ್ಷೇಪ

ಎಸ್.ರುದ್ರೇಗೌಡ ನೇತೃತ್ವದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:31 IST
Last Updated 10 ಜುಲೈ 2025, 4:31 IST
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ನೇತೃತ್ವದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿದರು
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ನೇತೃತ್ವದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿದರು   

ಶಿವಮೊಗ್ಗ: ಕಾರ್ಮಿಕರ ಕನಿಷ್ಠ ವೇತನ ಪರಿಷ್ಕೃತ ದರಗಳ ಅಧಿಸೂಚನೆಗೆ ಆಕ್ಷೇಪಣೆ ವ್ಯಕ್ತಪಡಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ನೇತೃತ್ವದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಬೆಂಗಳೂರಿನಲ್ಲಿ ಮನವಿಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಸ್.ರುದ್ರೇಗೌಡ ಅವರು, ‘ಕನಿಷ್ಠ ವೇತನ ಹೆಚ್ಚಳ ಪ್ರಸ್ತಾಪಿಸುವ ಅಧಿಸೂಚನೆ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಮಾಚೇನಹಳ್ಳಿ ಕೈಗಾರಿಕಾ ಸಂಘ, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ, ಕರ್ನಾಟಕ ಉದ್ಯೋಗದಾತರ ಸಂಘ ಸೇರಿದಂತೆ 160 ಕೈಗಾರಿಕೆಗಳು ಕಾರ್ಮಿಕ ಇಲಾಖೆಗೆ ತಮ್ಮ ಆಕ್ಷೇಪಣೆ ಕಳುಹಿಸಿವೆ. ಪ್ರಸ್ತಾವನೆ ತುಂಬಾ ಕಠಿಣವಾಗಿವೆ ಎಂದು ಆಕ್ಷೇಪಿಸಿವೆ’ ಎಂದು ಸಚಿವರಿಗೆ ತಿಳಿಸಿದರು.

‘ಕನಿಷ್ಠ ವೇತನ ಪ್ರಸ್ತಾವ ಬಹಳ ಹೆಚ್ಚಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ಶೇ 40ರಿಂದ ಶೇ 60ರಷ್ಟು ಹೆಚ್ಚಳವಿದೆ. ಹೆಚ್ಚಿದ ವೇತನ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಎಇ) ಹಾನಿಕಾರಕ ಆಗಬಹುದು. ಉದ್ಯೋಗ ನಷ್ಟ, ಮುಚ್ಚುವಿಕೆ ಅಥವಾ ಕಡಿಮೆ ವೇತನ ವೆಚ್ಚ ಹೊಂದಿರುವ ರಾಜ್ಯಗಳಿಗೆ ಕೈಗಾರಿಕೆಗಳು ಸ್ಥಳಾಂತರವಾಗಬಹುದು. ಇದು ರಾಜ್ಯದ ಆರ್ಥಿಕತೆ ಮತ್ತು ತೆರಿಗೆ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರವು ಎಲ್ಲರ ಅಭಿಪ್ರಾಯ ಆಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂದು ಒತ್ತಾಯಿಸಿದರು.

ADVERTISEMENT

ವೇತನ ತರ್ಕ ಬದ್ಧಗೊಳಿಸಲು ಸಮಿತಿ ರಚಿಸಬೇಕು. ಎಂಎಸ್‌ಎಂಇ ಮತ್ತು ದೊಡ್ಡ ಕೈಗಾರಿಕೆಗಳಿಗೆ ಕನಿಷ್ಠ ವೇತನ ಸ್ಲ್ಯಾಬ್‌ಗಳ ವಿಭಿನ್ನಗೊಳಿಸಬೇಕು. ಹೆಚ್ಚಿದ ವೇತನ ಹೊರೆ ನಿಭಾಯಿಸಲು ವಿದ್ಯುತ್ ಸುಂಕ ಸಬ್ಸಿಡಿ, ಕಾರ್ಮಿಕರ ಸೆಸ್ ಅಥವಾ ಕಾರ್ಯನಿರತ ಬಂಡವಾಳ ಬೆಂಬಲದ ಮೂಲಕ ವ್ಯವಹಾರಗಳಿಗೆ ಪರಿಹಾರ ಒದಗಿಸಬೇಕು ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಹಾಜರಿದ್ದರು.

ಕನಿಷ್ಠ ವೇತನವು ನೆರೆಯ ರಾಜ್ಯಗಳಿಗೆ ಸಮನಾಗಿರಬೇಕು. ಜಾಗತೀಕರಣ ವ್ಯವಸ್ಥೆಯಲ್ಲಿ ವೇತನ ಹೆಚ್ಚಿದ್ದರೆ ಉದ್ಯಮಗಳು ಇತರ ರಾಜ್ಯಗಳಿಗೆ ವಲಸೆ ಹೋಗುತ್ತವೆ
ಎಸ್.ರುದ್ರೇಗೌಡ ವಿಧಾನಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.