ADVERTISEMENT

ಮಾಚಿದೇವ ಸೇರಿದಂತೆ ಮಹನೀಯರ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಿ: ಶಾಸಕ ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:11 IST
Last Updated 2 ಫೆಬ್ರುವರಿ 2026, 3:11 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಚಿದೇವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ನಮಿಸಿದರು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಚಿದೇವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ನಮಿಸಿದರು   

ಶಿವಮೊಗ್ಗ : ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನ ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. 

ಜಿಲ್ಲಾಡಳಿತ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘದಿಂದ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಹೋಗಲಾಡಿಸಲು ಹೋರಾಟ ನಡೆಸಿದ ಶರಣರಲ್ಲಿ ಮಾಚಿದೇವರು ಕೂಡ ಅಗ್ರಗಣ್ಯರು. ಶರಣರ ಮಲಿನ‌ ಬಟ್ಟೆಗಳನ್ನು ಶುಚಿಗೊಳಿಸುವ ಜೊತೆಗೆ  ಸಮಾಜದ ಮಲಿನವನ್ನೂ ತೊಳೆಯುತ್ತಾ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು‌ ಸಮರ್ಪಿಸಿಕೊಂಡರು ಎಂದರು.

ADVERTISEMENT

ನಮ್ಮದು ಸನಾತನ ಸಾಂಸ್ಕೃತಿಕ ರಾಷ್ಟ್ರ. ನಮ್ಮ ದೇಶದ ಹುಟ್ಟು ಯಾವಾಗ ಆಯಿತೆಂದು ಗೊತ್ತಿಲ್ಲ. ನಮ್ಮ ದೇಶಕ್ಕೆ ಸಾವೂ ಇಲ್ಲ. ದೇಶದ ಉಳಿವಿಗೆ ನಂಬಿಕೆಗಳು ಕಾರಣವಾಗಿದೆ ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಎ.ಎಂ.ನಾಗರಾಜ, 'ದೇಶ ಸುಭಿಕ್ಷವಾಗಿರಲು ಮೊದಲು ಜನರನ್ನು‌ ಸರಿಪಡಿಸಬೇಕು ಎಂದು ಮಾಚೆದೇವರು ಹೇಳಿದ್ದರು. ಕನಿಷ್ಟ ಶಿವ ಜ್ಞಾನ ಇರಬೇಕು. ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು. ಮಾಚಿದೇವರ 345 ವಚನಗಳು ಲಭ್ಯವಿದ್ದು, ಅತ್ಯಂತ ಸರಳ ಭಾಷೆಯಲ್ಲಿ ರಚಿಸಿರುವ ಈ ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ' ಎಂದು ಹೇಳಿದರು.

‘ಬಸವಣ್ಣನವರು ಸಹ ಮಾಚಿದೇವರಿಗೆ ಅರಿವಿನ ತಿರುಳು ಎಂದು ಬಣ್ಣಿಸಿದ್ದು. ಅನೇಕ ಶಿವಶರಣರು, ಕವಿಗಳು ಮಾಚಿದೇವರ ಬಗ್ಗೆ, ಅವರ ಕಾಯಕ ನಿಷ್ಠೆಯ ಬಗ್ಗೆ ಬರೆದಿದ್ದಾರೆ. ಕಲ್ಯಾಣದಲ್ಲಿ ಶರಣರ ಬಟ್ಟೆ ಮಡಿ ಮಾಡುವ ಕೆಲಸ ಹಾಗೂ ಕಲ್ಯಾಣಕ್ಕೆ ಬರುವ ಜನರನ್ನು ಪರೀಕ್ಷಿಸುವಂತಹ ಕೆಲಸ ಮಾಡುತ್ತಿದ್ದ ಮಾಚಿದೇವರು, ಬಿಜ್ಜಳರಾಯನ ಪಟ್ಟದ ಆನೆಯನ್ನು ರಟ್ಟೆಯಿಂದ ಎಳೆದೊಗೆಯುವ ಉಲ್ಲೇಖವಿದೆ. ಇದು ಅವರ ಧೈರ್ಯ, ನೇರ ನುಡಿಗೆ ಸಾಕ್ಷಿ’ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಶಿಲ್ದಾರ್ ರಾಜೀವ್, ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಚ್.ಎಸ್.ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಹಾಜರಿದ್ದರು.

ಸಮಾಜದಲ್ಲಿ‌ನ ಅಂಕು- ಡೊಂಕುಗಳ ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು. ಇಂತಹ ಶರಣರ ವಚನಕಾರರ ಸಾಧಕರ ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು.
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ಶಾಸಕ
ಮಡಿವಾಳ ಸಮಾಜ ಸಂಖ್ಯಾ ಬಲ ಇಲ್ಲದ ಕಾರಣ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸರ್ಕಾರ ಸಮಾಜಕ್ಕೆ ಅಸ್ತಿತ್ವ ನೀಡಬೇಕು. ಮಾಚಿದೇವರ ಚರಿತ್ರೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಶಾಲೆಗಳಲ್ಲಿ ಅವರ ಜಯಂತಿ ಆಚರಿಸುವಂತಾಗಬೇಕು
ಎ.ಎಂ.ನಾಗರಾಜ ತ್ಯಾಗರ್ತಿ ಶಾಲೆ ಶಿಕ್ಷಕ
ನಾಡಿನ ಶೋಷಿತ ಹಾಗೂ ದುರ್ಬಲ ವರ್ಗಗಳನ್ನು ಮೇಲೆತ್ತಿ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದಲೇ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ
ಎಚ್.ಎಸ್.ಸುಂದರೇಶ್ ಸುಡಾ ಅಧ್ಯಕ್ಷ
ಮಡಿವಾಳ ಸಮುದಾಯದವರು ಕಾಯಕ ನಿಷ್ಠರು. ಮುಂದಿನ ಪೀಳಿಗೆಯ ಬಲವರ್ಧನೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರು ಎಲ್ಲ ರಂಗಗಳಲ್ಲಿ‌ ಬೆಳೆಯುವಂತೆ ಗಮನ ಹರಿಸಬೇಕು.
ಕೆ.ಚೇತನ್ ಜವಳಿ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.