ವಿಲ್ಸನ್
ಭದ್ರಾವತಿ: ಮೂರು ದಿನಗಳ ಹಿಂದೆ ಹುಡ್ಕೊ ಕಾಲೊನಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವು ಕಂಡಿದ್ದು, ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ವಿಲ್ಸನ್ (31) ಮೃತ ಯುವಕ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಟಿ.ಬಾಬು ಅಲಿಯಾಸ್ ಜೋಶ್ವ, ಜೋಯೆಲ್ ಮತ್ತು ಜೋಸೆಫ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಹಳೆ ಬಳ್ಳಾಪುರದ ಪಿರಿಯಾಪಟ್ಟಣದಮ್ಮನ ದೇವಸ್ಥಾನದ ಬಳಿ ಈ ಮೂವರೂ ವಿಲ್ಸನ್‌ಗೆ ಹಿಗ್ಗಾಮುಗ್ಗ ತಳಿಸಿದ್ದಾರೆ. ನಂತರ ಆತನ ಸ್ನೇಹಿತನಿಗೆ ಕರೆ ಮಾಡಿ ವಿಲ್ಸನ್ ಕುಡಿದು ಮಲಗಿದ್ದಾನೆ ಎಂದು ತಿಳಿಸಿದ್ದಾರೆ. ವಿಲ್ಸನ್ ಸ್ನೇಹಿತ ಸಂತೋಷ್ ಸ್ಥಳಕ್ಕೆ ಬಂದು ಎದ್ದೇಳಿಸಿದರೂ ಏಳದ ಕಾರಣ ಮೂವರೂ ಬೈಕ್‌ನಲ್ಲಿ ಕರೆದುಕೊಂಡು ಬಂದು ಮನೆಯಲ್ಲಿ ಮಲಗಿಸಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ವಿಲ್ಸನ್ ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಅವರ ತಂದೆ ಎಲ್ಲ ಕಡೆ ಹುಡುಕಾಡಿ ಮನೆಗೆ ಮರಳಿದರು. ಆಗ ವಿಲ್ಸನ್ ಅಸ್ವಸ್ಥಗೊಂಡು ಮಲಗಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟೊತ್ತಿಗಾಗಲೇ ವಿಲ್ಸನ್ ಮೃತಪಟ್ಟಿದ್ದನು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.