ಹೊಸನಗರ: ‘ಆಯಾ ಕಾಲಕ್ಕೆ ಅನುಗುಣವಾಗಿ ಮಹಾತ್ಮರ ಜನನ ಆಗುತ್ತದೆ. ಸಮಾಜ ಪರಿವರ್ತನೆಗೆ ಗೌತಮ ಬುದ್ಧ ನೀಡಿದ ಕೊಡುಗೆ ಅಪಾರ. ಆತನ ತತ್ವಾದರ್ಶಗಳು ಸರ್ವಕಾಲಕ್ಕೂ ಸತ್ಯವೇ ಆಗಿವೆ’ ಎಂದು ಸಾಹಿತಿ ಶಾಂತರಾಮ ಪ್ರಭು ತಿಳಿಸಿದರು.
ಪಟ್ಟಣ ಸಮೀಪದ ವರಕೋಡು ಗ್ರಾಮದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಗಣೇಶಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಮಕ ಕಲಾವಿದೆ ಅನುಪಮಾ ಸುರೇಶ್ ಹಾಗೂ ಅಶೋಕ ಕುಮಾರ್ ಬುದ್ಧನ ಜೀವನ– ಸಾಧನೆ ಕುರಿತು ಗಮಕ ವಾಚಿಸಿದರು.
ಕೆಸುವಿನ ಮನೆ ರತ್ನಾಕರ್, ಇಲಿಯಾಸ್, ನವೀನ್ ಕುಮಾರ್ ಶಿವಮೊಗ್ಗ ಕವನ ವಾಚಿಸಿದರು. ವಸಿಷ್ಠ ಮತ್ತು ಚೈತನ್ಯ ಕಥೆ ಹೇಳಿದರು.
ನ್ಯಾಯಾಲಯದ ಕಟಕಟೆಯಲ್ಲಿನ ಹಾಸ್ಯ ಪ್ರಸಂಗದ ನಿಜ ಸಂಗತಿಗಳನ್ನು ವಕೀಲ ಕೆ.ಬಿ.ಪ್ರಶಾಂತ್ ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ನಿವೃತ್ತ ಶಿಕ್ಷಕ ಕುಬೇಂದ್ರಪ್ಪ, ಪ್ರವೀಣ, ಅಶ್ವಿನಿ ಪಂಡಿತ್, ಶಿಕ್ಷಕ ಶಿವಪ್ಪ, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಕೆ.ಜಿ. ನಾಗೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.