ADVERTISEMENT

ಶಿವಮೊಗ್ಗ | ನಿವೇಶನ ಹಂಚಿಕೆ ವಿಳಂಬ; ಆಕ್ರೋಶ

ಸೋಗಾನೆ ವಿಮಾನ ನಿಲ್ದಾಣದ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:01 IST
Last Updated 10 ಅಕ್ಟೋಬರ್ 2025, 7:01 IST
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಎದುರು ಗುರುವಾರ ಸಂತ್ರಸ್ತರು ಅರಂಭಿಸಿದ ಪ್ರತಿಭಟನೆಯ ನೋಟ
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಎದುರು ಗುರುವಾರ ಸಂತ್ರಸ್ತರು ಅರಂಭಿಸಿದ ಪ್ರತಿಭಟನೆಯ ನೋಟ   

ಶಿವಮೊಗ್ಗ : ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡದೇ ಕರ್ನಾಟಕ ಗೃಹ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಗುರುವಾರ ಬೆಳಿಗ್ಗೆಯಿಂದ ಪ್ರತಿಭಟನೆ ಅರಂಭಿಸಿತು.

ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಮಹಾತ್ಮಗಾಂಧೀಜಿ ಅವರ ಭಾವಚಿತ್ರದೊಂದಿಗೆ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.

ವಿಮಾನ ನಿಲ್ದಾಣಕ್ಕಾಗಿ ನಾವು ಭೂಮಿ ಕಳೆದುಕೊಂಡಿದ್ದೇವೆ. ನಮಗೆ ನಿವೇಶನ ನೀಡಲು ಸರ್ಕಾರದಿಂದ ಆದೇಶವೂ ಆಗಿತ್ತು. ನ್ಯಾಯಾಲಯ ಕೂಡ ನಿವೇಶನ ಕೊಡುವಂತೆ ಸೂಚಿಸಿದೆ. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲೇ ನಮಗೆ ನಿವೇಶನ ನೀಡಬೇಕಿತ್ತು. ಆದರೆ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ವಿಮಾನ ನಿಲ್ದಾಣದ ಉದ್ಘಾಟನೆಯ ದಿನ ಪ್ರತಿಭಟನೆ ಹಮ್ಮಿಕೊಂಡಿದ್ದನ್ನು ಕಂಡು ಜಿಲ್ಲಾಡಳಿತ ನಿವೇಶನ ಹಂಚಿಕೆಯ ಪತ್ರವನ್ನೂ ನೀಡಿತ್ತು. ಆದರೆ ಅಲ್ಲಿ ನಿವೇಶನ ಹಂಚದಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ತಡೆಯಾಜ್ಞೆ ತಂದಿದ್ದರು. ವಕೀಲರ ನೇಮಕ ಮಾಡಿಕೊಂಡು ನಾವೇ ತಡೆಯಾಜ್ಞೆ ತೆರವುಗೊಳಿಸಿದ್ದೆವು. ಆದರೂ ನಮಗೆ ನಿವೇಶನ ಹಂಚಿಕೆಯಾಗಿಲ್ಲ ಎಂದರು.

‘ಕೆಎಚ್‌ಬಿಗೆ ಸರ್ಕಾರ ಹಣ ಪಾವತಿಸಿಲ್ಲ ಎಂಬ ಕಾರಣ ನೀಡಿ ಹಂಚಿಕೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಜಿಲ್ಲಾಡಳಿತದ ಈ ವಿಳಂಬ ನೀತಿ ವಿರೋಧಿಸಿ ನ್ಯಾಯ ಸಿಗುವವರೆಗೂ ಅನಿರ್ದಿಷ್ಟ ಕಾಲಾವಧಿವರೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣ ಕೂಡ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. 
  
ಪ್ರತಿಭಟನೆಯ ನೇತೃತ್ವ ಕೃಷ್ಣಪ್ಪ, ಮಹಾದೇವ, ಶಿವಾನಂದ, ರಾಮಣ್ಣ, ನಾಗರಾಜ್, ಎನ್.ಟಿ. ಕುಮಾರ್, ವೀರಭದ್ರ, ರಾಘವೇಂದ್ರ, ಬಸವಲಿಂಗಪ್ಪ, ರಾಮಣ್ಣ, ರಂಗಪ್ಪ, ಅಂಬಿಕಾ, ನಾಗರತ್ನಮ್ಮ, ಸಾವಿತ್ರಮ್ಮ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.