ADVERTISEMENT

ಶಿವಮೊಗ್ಗ: ಬೀದಿ ಬದಿಯಲ್ಲಿನ ವ್ಯಾಪಾರವೂ ಇನ್ನು ‘ಸ್ಮಾರ್ಟ್’

ವಹಿವಾಟಿಗೆ 14 ಕಡೆ ಜಾಗ ಗುರುತಿಸಿದ ಮಹಾನಗರ ಪಾಲಿಕೆ; ಸ್ಥಳಾಂತರಕ್ಕೆ ಸಿದ್ಧತೆ

ವೆಂಕಟೇಶ ಜಿ.ಎಚ್.
Published 5 ಆಗಸ್ಟ್ 2022, 2:25 IST
Last Updated 5 ಆಗಸ್ಟ್ 2022, 2:25 IST
ಶಿವಮೊಗ್ಗದ ಪಾರ್ಕ್ ಏರಿಯಾದಲ್ಲಿ ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗೆ ಗುರುತಿಸಿರುವ ಜಾಗಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ
ಶಿವಮೊಗ್ಗದ ಪಾರ್ಕ್ ಏರಿಯಾದಲ್ಲಿ ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗೆ ಗುರುತಿಸಿರುವ ಜಾಗಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ   

ಶಿವಮೊಗ್ಗ: ಇಲ್ಲಿನ ಬೀದಿ ಬದಿ ವ್ಯಾಪಾರಕ್ಕೆ ಮಹಾನಗರ ಪಾಲಿಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ವ್ಯಾಪಾರಿಗಳು ಸಿಕ್ಕಸಿಕ್ಕಲ್ಲಿ ಕುಳಿತು, ರಸ್ತೆ ಬದಿಗಳಲ್ಲಿನ ಫುಟ್‌ಪಾತ್‌ ಮೇಲೆಲ್ಲ ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುವುದನ್ನು ತಪ್ಪಿಸಲು ಅವರಿಗೆ ಸುರಕ್ಷಿತ ಸೂರು ಕಲ್ಪಿಸಲಿದೆ. ಅದಕ್ಕಾಗಿ ನಗರದ 14 ಕಡೆ ವ್ಯಾಪಾರ ವಲಯ ರೂಪಿಸಲು ಜಾಗ ಗುರುತಿಸಿದೆ.

‘ಸಿಹಿಮೊಗ್ಗೆ’ಯನ್ನು ಸ್ಮಾರ್ಟ್ ಸಿಟಿಯಾಗಿಸಲು ರಸ್ತೆಗಳ ವಿಸ್ತರಣೆ ಮಾಡಲಾಗಿದೆ. ರಸ್ತೆಗಳ ಮೇಲ್ಮೈ ದೊಡ್ಡದಾಗುತ್ತಿದ್ದಂತೆಯೇ ಅಲ್ಲಿ ಸೈಕಲ್, ವಾಕಿಂಗ್ ಪಾಥ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಆಡಳಿತ ಮುಂದಾಗಿದೆ. ಆದರೆ, ಆ ಜಾಗದಲ್ಲಿ ಈಗ ಬೀದಿ ಬದಿ ವ್ಯಾಪಾರಿಗಳು ನೆಲೆಗೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಅವರಿಗೆ ಪುನರ್ವಸತಿ ಕಲ್ಪಿಸಲು ಮಹಾನಗರ ಪಾಲಿಕೆಯು ಸ್ಥಳಗಳನ್ನು ಗುರುತಿಸಿದೆ.

ಮೂಲ ಸೌಕರ್ಯ ವ್ಯವಸ್ಥೆ: ಹೀಗೆ ಗುರುತಿಸಿದ ಸ್ಥಳದಲ್ಲಿ ವ್ಯಾಪಾರಿಗಳು ಕುಳಿತುಕೊಳ್ಳಲು ವ್ಯವಸ್ಥೆ, ಕುಡಿಯಲು ಶುದ್ಧ ನೀರು, ಶೌಚಾಲಯ, ಮಳೆ–ಬಿಸಿಲಿನಿಂದ ರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಪ್ರಾಣಿಗಳಿಂದ ಆಗಬಹುದಾದ ಅನಿರೀಕ್ಷಿತ ದಾಳಿಯಿಂದ ರಕ್ಷಣೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಿದೆ. ಈ ಕೆಲಸಗಳು ಪೂರ್ಣಗೊಂಡಲ್ಲಿ ವ್ಯಾಪಾರ ಒಂದೇ ಸ್ಥಳದಲ್ಲಿ ನೆಲೆಗೊಂಡು ಶಿವಮೊಗ್ಗ ನಗರ ಇನ್ನಷ್ಟು ಸ್ಮಾರ್ಟ್ ಆಗಲಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಗುರುತಿಸಿದ ಜಾಗದಲ್ಲೇ ವಹಿವಾಟು: ಬೀದಿ ಬದಿ ವ್ಯಾಪಾರಿಗಳು ಇನ್ನು ಮುಂದೆ ಕಡ್ಡಾಯವಾಗಿ ಗುರುತಿಸಲಾದ ವ್ಯಾಪಾರ ವಲಯಗಳಲ್ಲಿಯೇ ಕುಳಿತು ವಹಿವಾಟು ನಡೆಸಬೇಕಿದೆ. ಮೊದಲ ಹಂತದಲ್ಲಿ ಜಾಗ ಗುರುತಿಸುವಿಕೆ ಪೂರ್ಣಗೊಳಿಸಿರುವ ಪಾಲಿಕೆ, ಎರಡನೇ ಹಂತದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಿದೆ. ನಂತರ ನಿರ್ಬಂಧಿತ ಸ್ಥಳಗಳಲ್ಲಿವ್ಯಾಪಾರ ಮಾಡುತ್ತಿರುವವರನ್ನು ಗುರುತಿಸಿದ ಸ್ಥಳಕ್ಕೆ ಸ್ಥಳಾಂತರಿಸಲಿದೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕಾರ್ಯ ಪೂರ್ಣಗೊಂಡಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಲಿದೆ. ಫುಟ್‌ಪಾತ್‌, ರಸ್ತೆಗಳು ದಟ್ಟಣೆಯಿಂದ ಮುಕ್ತಗೊಂಡು ಸುರಕ್ಷಿತ ಸಂಚಾರಕ್ಕೆ ಅನುವು ಆಗಲಿದೆ ಎಂದು ಹೇಳುತ್ತಾರೆ.

ನಮ್ಮ ಹಿತ ಗಮನಿಸಿ: ‘ದೇಶದ ನಿರುದ್ಯೋಗ ನಿವಾರಣೆಯಲ್ಲಿ ಬೀದಿ ಬದಿ ವ್ಯಾಪಾರ ಮಹತ್ವದ ಕೊಡುಗೆ ನೀಡಿದೆ. ಹೀಗಾಗಿ ನಮ್ಮ ಹಿತರಕ್ಷಣೆ ವಿಚಾರದಲ್ಲಿ ಸರ್ಕಾರ ಸದಾ ಸ್ಪಂದಿಸಲಿ’ ಎಂದು ಶಿವಮೊಗ್ಗ ಮಹಾನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಕೋರುತ್ತಾರೆ.

ಪುನರ್ವಸತಿಯ ನಂತರ ಖಾಲಿಯಾಗುವ ಜಾಗದಲ್ಲಿ, ಇಲ್ಲವೇ ನಿಷೇಧಿತ ವ್ಯಾಪಾರ ವಲಯದಲ್ಲಿ ಹೊಸಬರು ವಹಿವಾಟು ನಡೆಸಲು ಮುಂದಾದರೆ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದೂ ಅವರು ಪಾಲಿಕೆ ಆಡಳಿತಕ್ಕೆ ಮನವಿ ಮಾಡುತ್ತಾರೆ.

***

ನಾವು ಈಗ ನಡೆಸುತ್ತಿರುವ ವಹಿವಾಟಿನ ಜಾಗದ 100 ಮೀಟರ್ ವ್ಯಾಪ್ತಿಯಲ್ಲಿಯೇ ಪಾಲಿಕೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಿ. ಬದಲಿಗೆ ಸ್ಮಶಾನದ ಸಮೀಪ, ನಿರುಪಯುಕ್ತ ಜಾಗದ ಬಳಿಗೆ ಸ್ಥಳಾಂತರ ಸಲ್ಲ.

ಚನ್ನವೀರಪ್ಪ ಗಾಮಗನಟ್ಟಿ, ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

***

ಗುರುತಿಸಿದ ಜಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸಿದ್ಧತೆ ನಡೆಸಿದ್ದೇವೆ. ಮುಂದಿನ ಅರು ತಿಂಗಳಲ್ಲಿ ವ್ಯಾಪಾರಸ್ಥರ ಸ್ಥಳಾಂತರ ಪೂರ್ಣಗೊಳ್ಳಲಿದೆ.

ಮಾಯಣ್ಣಗೌಡ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ

***

ಬೀದಿ ಬದಿಯ ವ್ಯಾಪಾರಸ್ಥರಿಗೆ ಒಂದೇ ಕಡೆ ಸೂರು ಕಲ್ಪಿಸಿದರೆ ನಾವು ವಿನಾಕಾರಣ ಅಲೆದಾಡುವುದು ತಪ್ಪಲಿದೆ. ಸಮಯ, ಇಂಧನ ಎಲ್ಲವೂ ಉಳಿತಾಯವಾಗಲಿದೆ

ಕವಿತಾ, ಗ್ರಾಹಕರು, ವಿನೋಬನಗರ

***

ಬೀದಿ ಬದಿಯ ವ್ಯಾಪಾರಸ್ಥರಿಗೆ ಪುನರ್ವಸತಿ ಕಲ್ಪಿಸುವಾಗ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಗುತ್ತಿಗೆದಾರರಿಗೆ ಮಳಿಗೆ ನೀಡುವ ಬದಲು ಅರ್ಹ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಲಿ.

ರೇಖಾ ರಂಗನಾಥ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ

***

ಬೀದಿ ಬದಿ ವ್ಯಾಪಾರಕ್ಕೆ ಗುರುತಿಸಿದ 14 ಸ್ಥಳಗಳ ವಿವರ

ಕ್ರಮ ಸಂಖ್ಯೆ; ಈಗಿರುವ ಬೀದಿ ಬದಿ ವ್ಯಾಪಾರದ ಸ್ಥಳ; ಪಾಲಿಕೆ ಗುರುತಿಸಿದ ಜಾಗ; ವಹಿವಾಟಿನ ಬಗೆ

1. ಗೋಪಿ ಸರ್ಕಲ್, ಸುಲ್ತಾನ್ ಡೈಮಂಡ್ ಸುತ್ತಲಿನವರು; ಐಸಿಐಸಿಐ ಬ್ಯಾಂಕ್‌ ಪಕ್ಕದಲ್ಲಿನ ದುರ್ಗಿಗುಡಿ ಕನ್ಸರ್‌ವೆನ್ಸಿ ಬಳಿ; ಮಂಡಕ್ಕಿ, ಬೋಂಡ, ಕಬ್ಬಿನ ಹಾಲು, ಆಹಾರ ಖಾದ್ಯ ಮಾರಾಟ

2. ವಾತ್ಸಲ್ಯ ಆಸ್ಪತ್ರೆಯ ಅಕ್ಕಪಕ್ಕ, ದುರ್ಗಿ ಗುಡಿ ಶಾಲೆಯ ಮುಂಭಾಗ, ಮಾಕ್ಸ್ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಆಸ್ಪತ್ರೆ ಮತ್ತು ರಾಘವೇಂದ್ರ ದೇವಸ್ಥಾನದ ಅಕ್ಕ‍ಪಕ್ಕದವರು; ದುರ್ಗಿಗುಡಿ ಎರಡನೇ ಕ್ರಾಸ್‌ನ ಸೀತಾರಾಮ ಕಲ್ಯಾಣ ಮಂದಿರದ ಹಿಂಭಾಗ; ತರಕಾರಿ, ಸೊಪ್ಪು, ಹಣ್ಣು, ಹೂವು ಮಾರಾಟ

3. ಶನೇಶ್ವರ ದೇವಸ್ಥಾನದಿಂದ ದೈವಜ್ಞ ಭಾಗದವರು; ದುರ್ಗಿಗುಡಿ ಮುಖ್ಯರಸ್ತೆ ಬಳಿ ಅವಕಾಶ; ಹಣ್ಣು, ಹೂವು, ಸೊಪ್ಪು,ತರಕಾರಿ ಮಾರಾಟ

4. ಸುರಭಿ ಹೋಟೆಲ್ ಸುತ್ತಮುತ್ತಲಿನ ವ್ಯಾಪಾರಿಗಳು; ಸುರಭಿ ಹೋಟೆಲ್ ಮುಂಭಾಗದ ಕನ್ಸರ್‌ವೆನ್ಸಿ; ಹಣ್ಣು, ಹೂವು, ಸೊಪ್ಪು, ತರಕಾರಿ ಮಾರಾಟ

5. ಕುವೆಂಪು ರೋಡ್, ಜೈಲ್ ರಸ್ತೆಯ ವ್ಯಾಪಾರಿಗಳು; ಹೊಸಮನೆ ದೈವಜ್ಞ ಕಲ್ಯಾಣ ಮಂಟಪದ ಬಳಿಗೆ; ಹಣ್ಣು, ಹೂವು, ಸೊಪ್ಪು, ತರಕಾರಿ ಮಾರಾಟ

6. ಮೆಗ್ಗಾನ್ ಆಸ್ಪತ್ರೆ ಮುಂಭಾಗದ ವ್ಯಾಪಾರಸ್ಥರು; ಆಸ್ಪತ್ರೆ ಹಿಂಭಾಗದ ಪಂಚಮುಖಿ ದೇವಸ್ಥಾನದ ಪಕ್ಕ; ಸಿದ್ಧ ಉಡುಪು ಮತ್ತು ಆಹಾರ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ

7. ಕುವೆಂಪು ರಸ್ತೆ ಹಾಗೂ ಇತರೆ ಭಾಗದ ವ್ಯಾಪಾರಸ್ಥರು; ಶಿವಶಂಕರ್ ಗ್ಯಾರೇಜ್ ಮುಂಭಾಗ; ಹಣ್ಣು, ತರಕಾರಿ ಮಾರಾಟ

8. ಕುವೆಂಪು ರಸ್ತೆಯ ವ್ಯಾಪಾರಸ್ಥರು; ಹೊಸಮನೆ ಮುಖ್ಯರಸ್ತೆ ಬಲಭಾಗಕ್ಕೆ; ಸಿದ್ಧ ಉಡುಪು ಇತ್ಯಾದಿ ಮಾರಾಟ

9. ಬಿ.ಎಚ್. ರಸ್ತೆಯ ರಾಯಲ್ ಆರ್ಕೆಡ್ ಮುಂಭಾಗದ ವ್ಯಾಪಾರಿಸ್ಥರು; ಗಾರ್ಡನ್ ಏರಿಯಾ ಗಣೇಶ್ ಸ್ಟೀಲ್ ಮುಂಭಾಗ ಒಂದನೇ ಕ್ರಾಸ್‌; ಫಾಸ್ಟ್‌ಫುಡ್ ಮಾರಾಟ

10. ಸಿಮ್ಸ್ ಕಾಲೇಜು ಮುಂಭಾಗದವರು; ಅಶೋಕ ನಗರ ಮುಖ್ಯ ರಸ್ತೆಯಲ್ಲಿ ಪೊಲೀಸ್ ಕ್ಯಾಂಟಿನ್ ಪಕ್ಕ; ಎಳನೀರು, ಕಬ್ಬಿನ ಹಾಲು, ಹಣ್ಣು ಮತ್ತು ಸಿದ್ಧ ಉಡುಪು ಮಾರಾಟ

11. ಲಕ್ಷ್ಮೀ ಮೆಡಿಕಲ್ಸ್‌ನಿಂದ ಮೆಗ್ಗಾನ್ ಆಸ್ಪತ್ರೆ ಮುಂಭಾಗ, ಆಯನೂರು ಗೇಟ್‌ವರೆಗಿನವರು; ಅಶೋಕ ನಗರದ ಸುರ್ವಣ ಸಾಂಸ್ಕೃತಿಕ ಭವನ ರಸ್ತೆ ಬಳಿಗೆ; ಲಘು ಉಪಹಾರ, ಎಳನೀರು, ಕಬ್ಬಿನಹಾಲು ಮತ್ತು ಸಿದ್ಧ ಉಡುಪು ಮಾರಾಟ

12. ಬಿ.ಎಚ್. ರಸ್ತೆಯ ಸಹ್ಯಾದ್ರಿ ಕಾಲೇಜಿನ ಮುಂಭಾಗ, ಟಿವಿ ಟವರ್, ಎನ್‌ಸಿಸಿ ಕ್ವಾಟ್ರಸ್ ಮುಂಭಾಗ, ವಿದ್ಯಾನಗರ ಹಾಗೂ ಕೆನರಾ ಬ್ಯಾಂಕ್ ಅಕ್ಕಪಕ್ಕದ ವ್ಯಾಪಾರಿಗಳು; ವರ್ತೂರು ರಸ್ತೆ ಹಾಗೂ ವಿದ್ಯಾನಗರದ ಸಹ್ಯಾದ್ರಿ ಬಾಲಿಕ ಹಾಸ್ಟೆಲ್ ಪಕ್ಕಕ್ಕೆ; ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳ ಮಾರಾಟ

13. ವಿದ್ಯಾನಗರ ಎಡ ಮತ್ತು ಬಲಭಾಗದಿಂದ ಎಂಆರ್‌ಎಸ್ ಸರ್ಕಲ್‌ವರೆಗಿನ ವ್ಯಾಪಾರಸ್ಥರು; ವಿದ್ಯಾನಗರದ ಟ್ರಾಫಿಕ್ ಪೊಲೀಸ್ ಮತ್ತು ನಾಡಕಚೇರಿ ಪಕ್ಕದ ರಸ್ತೆಗೆ (ಸ್ಯಾಂಡಲ್ ಕ್ವಾಟ್ರಸ್ ಪಕ್ಕ) ಸ್ಥಳಾಂತರ; ತರಕಾರಿ, ಹಣ್ಣು, ಹೂವು ಮತ್ತು ಕಬ್ಬಿನ ಹಾಲು ಮಾರಾಟ

14. ರಾಮಣ್ಣಶೆಟ್ಟಿ ಪಾರ್ಕ್ ಮುಂಭಾಗದವರು; ಜೈನ್ ಕಲ್ಯಾಣ ಮಂದಿರದ ಮುಂಭಾಗದ ಕನ್ಸರ್‌ವೆನ್ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.