ಶಿವಮೊಗ್ಗ: ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಲ್ಲಿ ಬಾಣಸಿಗರಾಗಿ ಬದಲಾಗಿದ್ದರು. ಬೆಂಕಿರಹಿತ ಖಾದ್ಯಗಳ ತಯಾರಿಕೆಯಲ್ಲಿ ಮಗ್ನರಾಗಿದ್ದರು. ವಿದ್ಯಾರ್ಥಿಗಳೇ ತಯಾರಿಸಿದ ಪಾನಿಪೂರಿ, ಸ್ಯಾಂಡ್‌ವಿಚ್, ಹಣ್ಣಿನ ರಸಾಯನ, ಚಾಕೊಲೆಟ್, ಪೌಷ್ಟಿಕ ನೂಡಲ್ಸ್, ವಿವಿಧ ಬಗೆಯ ಪಾನೀಯಗಳು, ಕಾಳು, ಕಾರ್ನ್ ಮತ್ತು ವಿವಿಧ ಧಾನ್ಯಗಳಿಂದ ಕೂಡಿದ ಖಾದ್ಯಗಳು ಆಹಾರಪ್ರಿಯರ ಮನಸು ಗೆದ್ದವು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಸ್ಪಂದನ ಮಹಿಳಾ ವಿಭಾಗದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ನಿರ್ವಹಣೆ, ಸಾಂಸ್ಕೃತಿಕ ಮತ್ತು ಆಹಾರ ಮೇಳ ಸ್ಪರ್ಧೆಯು ಇದಕ್ಕೆ ವೇದಿಕೆ ಒದಗಿಸಿತ್ತು.
15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಆಹಾರ ಮೇಳದಲ್ಲಿ, ಆಹಾರ ಪ್ರಿಯರಿಗೆ ತಾವು ತಯಾರಿಸಿದ ಖಾದ್ಯಗಳನ್ನು ವಿದ್ಯಾರ್ಥಿಗಳು ಉಣಬಡಿಸಿದರು. ಕೈಗೆಟುಕುವ ದರದಲ್ಲಿ ಸಿದ್ಧಪಡಿಸಿದ್ದ ತಿನಿಸುಗಳನ್ನು ಖರೀದಿಸಲು ಸಂಪೂರ್ಣ ಡಿಜಿಟಲ್ ಪಾವತಿ ಸೌಲಭ್ಯ ಕಲ್ಪಿಸಲಾಗಿತ್ತು. ವಿವಿಧ ನಿರ್ವಹಣಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ‘ನಾಲ್ಕು ಗೋಡೆಗಳ ನಡುವಿನ ಕಲಿಕೆಯ ಹೊರತಾಗಿ ಕೌಶಲದ ಆಧಾರದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲು ಪಠ್ಯೇತರ ಚಟುವಟಿಕೆಗಳು ಅವಕಾಶ ಮಾಡಿಕೊಡಲಿವೆ. ಸಾಮಾಜಿಕ ನೈಪುಣ್ಯತೆ ಪಡೆಯಲು ಪಠ್ಯೇತರ ಚಟುವಟಿಕೆಗಳು ಸಹಕಾರಿ’ ಎಂದರು.
ಭಾರತೀಯರು ವಿಶ್ವದ ವಿವಿಧ ಕಡೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಮಾಜದ ಋಣ ತೀರಿಸಲು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಹಂಬಲ ಯುವ ಸಮೂಹದ್ದಾಗಿರಬೇಕು. ಹಿರಿಯರಲ್ಲಿದ್ದಂತೆ ಯುವ ಸಮೂಹದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಮರ್ಥ್ಯ ಕುಂಠಿತಗೊಂಡಿದೆ. ರಸ್ತೆ ಬದಿಯ ಚಾಟ್ಸ್‌ಗಳಿಗಿಂತ ಮೀರಿದ ರುಚಿ ತಾಯಿಯ ಅಡುಗೆಯಲ್ಲಿದೆ ಅನ್ನುವ ಸತ್ಯ ಅರಿಯಿರಿ ಎಂದು ಕಿವಿಮಾತು ಹೇಳಿದರು.
ಉಪನ್ಯಾಕರಾದ ಶ್ರೀಲಲಿತಾ, ಘನಶ್ಯಾಮ್, ಎನ್.ಮಂಜುನಾಥ, ಜೆ.ನಕ್ಷಾ ಉಪಸ್ಥಿತರಿದ್ದರು. ಎ.ಸಿ. ರೂಪಾ ನಿರೂಪಿಸಿದರು.
ಕೌಶಲ ಕೊರತೆಯಿಂದ ಹಿನ್ನಡೆ
‘ಅಂಕಗಳೊಂದೇ ಜೀವನದ ಗುರಿಯಾಗಬಾರದು. ಎಷ್ಟೇ ಅಂಕ ಪಡೆದಿದ್ದರೂ ವಿದ್ಯಾರ್ಥಿಗಳು ಕೌಶಲ ಕೊರತೆಯಿಂದ ಬದುಕಿನ ಗುರಿ ತಲುಪುವಲ್ಲಿ ಹಿನ್ನಡೆಯಾಗುತ್ತಿದೆ. ಮೊಬೈಲೇ ಜೀವನವಾಗಿ ಹೋಗಿದೆ. ಒಂಟಿತನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿರುವುದು ದುರದೃಷ್ಟಕರ. ಇಂತಹ ಅಂಧತ್ವದಿಂದ ಹೊರಬರಲು ಪಠ್ಯೇತರ ಚಟುವಟಿಕೆಗಳು ಸಹಕಾರಿ’ ಎಂದು ಕಾಲೇಜಿನ ಪ್ರಾಚಾರ್ಯೆ ಪಿ.ಆರ್.ಮಮತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.