ADVERTISEMENT

ಶಿವಮೊಗ್ಗ | ಶೇ 80ರಷ್ಟು ಸಮೀಕ್ಷೆ ಪೂರ್ಣ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಎರಡು ದಿನದಲ್ಲಿ ಉಳಿದಿರುವ 85 ಸಾವಿರ ಮನೆಗಳ ಸಮೀಕ್ಷೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 6:06 IST
Last Updated 7 ಅಕ್ಟೋಬರ್ 2025, 6:06 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆರಂಭಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ 4 ಲಕ್ಷ ಮನೆಗಳು ಪೂರ್ಣಗೊಂಡಿದ್ದು, ಶೇ 80ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

‘ಜಿಲ್ಲೆಯಲ್ಲಿ ಅಂದಾಜು ಸಮೀಕ್ಷೆಗೆ 4.85 ಲಕ್ಷ ಮನೆಗಳನ್ನು ಗುರುತಿಸಲಾಗಿದೆ. ಉಳಿದ ಎರಡು ದಿನಗಳಲ್ಲಿ 85 ಸಾವಿರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಅದಕ್ಕಾಗಿ 4,543 ಬ್ಲಾಕ್‌ಗಳನ್ನು ಸೃಜಿಸಲಾಗಿದೆ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

ಸೊರಬ ತಾಲ್ಲೂಕಿನಲ್ಲಿ ಶೇ 100ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ಅಲ್ಲದೇ ಶಿಕಾರಿಪುರದಲ್ಲಿ ಶೇ 90ರಷ್ಟು ಗಣತಿ ಪೂರ್ಣಗೊಂಡಿದೆ. ಉಳಿದಂತೆ ಜಿಲ್ಲೆಯಾದ್ಯಂತ ಸಮೀಕ್ಷೆ ಪ್ರಗತಿ ಹಂತದಲ್ಲಿದೆ. ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಸಮೀಕ್ಷೆಗೆ ಅಡಚಣೆಯಾಗುತ್ತಿರುವ ಕೆಲವು ಸ್ಥಳಗಳನ್ನು ಗುರುತಿಸಿ, ಸಮೀಕ್ಷೆಗೆ ಪೂರ್ಣಗೊಳಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ADVERTISEMENT

ಸಮೀಕ್ಷೆ ಮಾಡುವವರು ಮನೆ, ಮನೆ ಸಮೀಕ್ಷೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಿ ಎಂದು ಮನವಿ ಮಾಡಿದ ಅವರು, ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಮಾಹಿತಿ ಪಡೆದುಕೊಳ್ಳಲಾಗದು. ಸಮೀಕ್ಷೆಗೆ ಸರಿಯಾದ ಮಾಹಿತಿ ನೀಡಿದಲ್ಲಿ, ಸರ್ಕಾರದ ಯೋಜನೆಗಳ ಲಾಭ ಇನ್ನಷ್ಟು ಸಾರ್ವಜನಿಕರು ಪಡೆದುಕೊಳ್ಳಲು ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಮಾಹಿತಿ ನಿಖರವಾಗಿ ದಾಖಲಿಸಲಾಗದೇ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದರು.

ಸಮೀಕ್ಷಾ ಕಾರ್ಯದ ಪೂರ್ವದಲ್ಲಿ ಮನೆಮನೆಗೆ ಅಂಟಿಸಲಾಗಿರುವ ಗುರುತಿನ ಸಂಖ್ಯೆಯನ್ನು ಖಾಲಿ ಮನೆ, ಧಾರ್ಮಿಕ ಸ್ಥಳಗಳು, ವಾಣಿಜ್ಯ ಕಟ್ಟಡಗಳಲ್ಲೂ ಅಂಟಿಸಲಾಗಿದೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಮೇಲ್ವಿಚಾರಕರು ಒಂದೆರೆಡು ದಿನಗಳಲ್ಲಿ ಸರಿಪಡಿಸಿ, ಅಂತಿಮ ಮಾಹಿತಿ ನೀಡಲಿದ್ದಾರೆ ಎಂದರು.

ಕೆಲವು ಸ್ಥಳಗಳಲ್ಲಿನ ಟವರ್‌ ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಂಡು ವಾಸಸ್ಥಳಕ್ಕೆ ಬಂದು ಸಮೀಕ್ಷೆ ಮಾಡಿ ಎಂದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳು ಬೇಡಿಕೆ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ತಕ್ಷಣಕ್ಕೆ ಇತ್ಯರ್ಥಪಡಿಸಲು ಸಾಧ್ಯವಾಗದು. ಅದನ್ನು ಆದ್ಯತೆಯ ಮೇರೆಗೆ ಸಹಕರಿಸಲು ಗಮನಹರಿಸಲಾಗುವುದು. ಗ್ರಾಮೀಣರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಈ ಸಮೀಕ್ಷಾ ಕಾರ್ಯದಲ್ಲಿ ಕಂದಾಯ, ಬಿ.ಸಿ.ಎಂ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಸಹಕಾರ ಪಡೆದುಕೊಳ್ಳಲಾಗಿದೆ. ಸಮೀಕ್ಷೆಯ ಕುರಿತು ಸಮಸ್ಯೆಗಳು ಎದುರಾದರೆ ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ಸಾಗರದ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್‌, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಉಪಸ್ಥಿತರಿದ್ದರು.

ನೆಟ್‌ವರ್ಕ್ ಸಮಸ್ಯೆ ಪರ್ಯಾಯ ಕ್ರಮ; ಸಿಇಒ

ಹೊಸನಗರ ಸಾಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ಕೆಲವು ಆಯ್ದ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಅದನ್ನು ಪರಿಹರಿಸಿ ಸಮೀಕ್ಷೆಯನ್ನು ನಿಗದಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಪರ್ಯಾಯ ಕ್ರಮಗಳ ಕೈಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್‌ ಮಾಹಿತಿ ನೀಡಿದರು. ನೆಟ್‌ವರ್ಕ್ ಸಮಸ್ಯೆ ಇರುವ 250ಕ್ಕೂ ಹೆಚ್ಚಿನ ಸ್ಥಳಗಳನ್ನು ಗುರುತಿಸಿ ಸಮೀಪದ ಗ್ರಾಮ ಪಂಚಾಯ್ತಿ ಅಥವಾ ಶಾಲೆಗಳಲ್ಲಿ ನೆಟ್‌ವರ್ಕ್‌ನ ಸೌಲಭ್ಯವಿರುವ ಸ್ಥಳಗಳಲ್ಲಿ ದಾಖಲೆಗಳ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಯ ಸಹಕಾರ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.