
ಶಿವಮೊಗ್ಗ: ನಗರದಲ್ಲಿ ಅನುಮತಿ ಪಡೆಯದೇ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ವಿರುದ್ಧ ಮಂಗಳವಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಗೋಪಿಶೆಟ್ಟಿ ಕೊಪ್ಪದಲ್ಲಿ ದಾಮೋದರ್ ಎಂಬುವವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದ ತುಂಗಾ ನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ನೇತೃತ್ವದ ತಂಡ, ₹ 39 ಲಕ್ಷ ನಗದು, 24 ಮೊಬೈಲ್ ಫೋನ್, ಒಂದು ಲ್ಯಾಪ್ ಟಾಪ್, 72 ಚೆಕ್, 19 ವಾಹನಗಳ ಆರ್.ಸಿ ಬುಕ್, ಏಳು ವೆಹಿಕಲ್ ಬಾಂಡ್, ಅಗ್ರಿಮೆಂಟ್ ಕಾಪಿ, ಬ್ಯಾಂಕ್ ಪಾಸ್ ಬುಕ್, ಸೇಲ್ ಡೀಡ್, ಪಹಣಿ ವಶಪಡಿಸಿಕೊಂಡಿದೆ.
ಗೃಹಪ್ರವೇಶದ ಮರುದಿನವೇ ದಾಳಿ: ಗೋಪಿಶೆಟ್ಟಿ ಕೊಪ್ಪದಲ್ಲಿ ದಾಮೋದರ್ ಎರಡು ಅಂತಸ್ತಿನ ದೊಡ್ಡ ಮನೆ ಕಟ್ಟಿದ್ದು, ಸೋಮವಾರ ಗೃಹಪ್ರವೇಶ ನಡೆದಿತ್ತು. ಮರುದಿನ ಮುಂಜಾನೆಯೇ ಪೊಲೀಸರು ದಾಳಿ ನಡೆಸಿದ್ದಾರೆ. ಸಾಲ ಪಡೆದವರಿಂದ ದಾಮೋದರ್ ಅಡವಿಟ್ಟುಕೊಂಡಿದ್ದ 29 ಬೈಕ್‌ಗಳು ಮತ್ತು ಎರಡು ಕಾರುಗಳನ್ನೂ ಜಪ್ತಿ ಮಾಡಲಾಗಿದೆ. ಅಡವಿಟ್ಟುಕೊಂಡ ವಾಹನಗಳನ್ನು ಇರಿಸಲು ಪ್ರತ್ಯೇಕ ಶೆಡ್ ಮಾಡಿಕೊಂಡಿರುವುದು ಕಂಡುಬಂದಿದೆ.
ಮನೆ ಬಾಡಿಗೆ, ಸೈಟ್ ಬ್ರೋಕರ್ ಕೆಲಸ ಮಾಡುತ್ತಿದ್ದುದಾಗಿ ಹೇಳಿರುವ ದಾಮೋದರ್ ಬಡ್ಡಿ ವಹಿವಾಟು ನಡೆಸುತ್ತಿದ್ದರು. ಸಾಲ ಪಡೆದು ತೊಂದರೆಗೀಡಾದವರು ನೀಡಿದ ದೂರಿನ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
11 ಕಡೆ ದಾಳಿ; 9 ಮಂದಿ ವಿರುದ್ಧ ಪ್ರಕರಣ: ಅಕ್ರಮ ಬಡ್ಡಿ ದಂಧೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಾರ್ನಬೈಲು, ಅಣ್ಣಾನಗರ, ಕಾಮಾಕ್ಷಿ ಬೀದಿ, ವಿದ್ಯಾನಗರ, ಕಾಶೀಪುರ, ಕೋಟೆ ಗಂಗೂರು, ಬಸವನಗುಡಿ, ಗೋಪಿಶೆಟ್ಟಿಕೊಪ್ಪ, ಚಾಲುಕ್ಯ ನಗರ, ಗುರುಪುರ ಹಾಗೂ ಇಂದಿರಾ ಬಡಾವಣೆ ಸೇರಿದಂತೆ ಒಟ್ಟು 11 ಕಡೆ ದಾಳಿ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.