ADVERTISEMENT

ಬಿಜೆಪಿ ಸೇರಲು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಧಾರ

ಕೋರಂ ಕೊರತೆಯಿಂದ ಸಾಮಾನ್ಯ ಸಭೆ ಮುಂದೂಡಿದ ಬಳಿಕ ಜ್ಯೋತಿ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 12:46 IST
Last Updated 21 ಅಕ್ಟೋಬರ್ 2020, 12:46 IST
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಜ್ಯೋತಿ ಕುಮಾರ್ ಅವರ ಪತಿ ಎಸ್‌.ಕುಮಾರ್ ಅವರು ಶಾಸಕ ಕುಮಾರ್ ಬಂಗಾರಪ್ಪ ಚರ್ಚಿಸಿದರು.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಜ್ಯೋತಿ ಕುಮಾರ್ ಅವರ ಪತಿ ಎಸ್‌.ಕುಮಾರ್ ಅವರು ಶಾಸಕ ಕುಮಾರ್ ಬಂಗಾರಪ್ಪ ಚರ್ಚಿಸಿದರು.   

ಶಿವಮೊಗ್ಗ: ‘ಎರಡು ವರ್ಷಗಳಿಂದಲೂ ಬಿಜೆಪಿ ಬೆಂಬಲ ನೀಡಿದೆ.ಈಗಲೂ ಅವರ ಸಹಕಾರದಿಂದಲೇ ಅಧ್ಯಕ್ಷೆಯಾಗಿ ಮುಂದುವರಿದಿರುವೆ. ಶೀಘ್ರ ಜೆಡಿಎಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರುವೆ’.

–ಇದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಅವರು ಮಾತು.ಸಾಮಾನ್ಯ ಸಭೆ ಬುಧವಾರವೂ ಕೋರಂ ಕೊರತೆಯ ಕಾರಣ ಮುಂದೂಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಜೆಡಿಎಸ್‌ ಟಿಕೆಟ್ ಪಡೆದು ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಾಲ್ಕೂವರೆ ವರ್ಷ ಕಾಂಗ್ರೆಸ್ ಸಹಕಾರ ಪಡೆದು ಅಧ್ಯಕ್ಷಗಾದಿ ಅನುಭವಿಸಿದ್ದರು. ಈಗ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಕಡೆ ವಾಲಿದ್ದಾರೆ.ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮ ಹಾಗೂ ಮಿತ್ರ ಪಕ್ಷಗಳನ್ನು ಕಡೆಗಣಿಸಿದ ಪರಿಣಾಮ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗಲಿಲ್ಲ. ಹಾಗಾಗಿ, ಸತತ ಎರಡನೇ ಬಾರಿ ಕೋರಂ ಕೊತರೆಯಿಂದಸಭೆ ಮುಂದೂಡಲಾಯಿತು.

ADVERTISEMENT

ಸಾಮಾನ್ಯ ಸಭೆಗೆ 51 ಸದಸ್ಯರು ಇರುತ್ತಾರೆ. ಕೋರಂಗೆ 26 ಸದಸ್ಯರು ಹಾಜರಾಗಲೇಬೇಕು. ಬಿಜೆಪಿಯ 15 ಸದಸ್ಯರು, ಸಂಸದ ರಾಘವೇಂದ್ರ, ಶಾಸಕರಾದ ಎಚ್‌.ಹಾಲಪ್ಪ ಹರತಾಳು, ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ನಾಲ್ವರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಒಬ್ಬರು ಕಾಂಗ್ರೆಸ್‌ ಸದಸ್ಯಸೇರಿ25 ಸದಸ್ಯರು ಹಾಜರಾಗಿದ್ದರು.

‘ಕೋರಂಗೆ ಒಬ್ಬರ ಅತ್ಯವಿತ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲದ ಕಾರಣ ಬರಲು ಸಾಧ್ಯವಾಗಿಲ್ಲ. ದಸರಾ ನಂತರ ಮತ್ತೆ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷೆ ಮಾಹಿತಿ ನೀಡಿದರು.

‘14ನೇ ಹಣಕಾಸು ಸೇರಿದಂತೆ ಹಲವು ಯೋಜನೆಗಳಿಗೆ ತುರ್ತು ಅನುಮೋದನೆಯ ಅಗತ್ಯವಿತ್ತು. ಸಭೆ ನಡೆಯದ ಕಾರಣ ರಸ್ತೆ, ಕುಡಿಯುವ ನೀರಿನ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಅವರಿಗೆ ನನ್ನ ಮೇಲೆ ಹಗೆತನ ಸಾಧಿಸುವುದೇ ಮುಖ್ಯವಾಗಿದೆ. ಅಭಿವೃದ್ಧಿ ಬೇಕಿಲ್ಲ’ ಎಂದು ಅಳಲು ತೋಡಿಕೊಂಡರು.

ಅಧ್ಯಕ್ಷೆ ಪತಿ ಎಸ್‌.ಕುಮಾರ್ ಮಾತನಾಡಿ, 30 ವರ್ಷಗಳಿಂದ ಒಂದೇ ಪಕ್ಷದಲ್ಲಿ ಇದ್ದೇನೆ. ಅಪ್ಪಾಜಿ ಗೌಡರ ಜತೆ ನಿರಂತರ ಕೆಲಸ ಮಾಡಿದ್ದೇನೆ. ಈಗ ಅನಿವಾರ್ಯವಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ಪಡೆದು ಭದ್ರಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ಇದೆ. ಶೀಘ್ರ ಬಿಜೆಪಿ ಸೇರುವ ದಿನ ಪ್ರಕಟಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.