ಭದ್ರಾವತಿ: ನಗರದ ಭದ್ರಾ ನದಿಯಲ್ಲಿ ನಿರ್ಮಿಸಿರುವ ಶಿವನ ಮಂಟಪಕ್ಕೆ ಈ ಬಾರಿ 65 ವರ್ಷ ತುಂಬುತ್ತಿದೆ. ಮಹಾ ಶಿವರಾತ್ರಿಯಂದು ಪ್ರತೀ ವರ್ಷದಂತೆ ಈ ವರ್ಷವೂ ಸಹಸ್ರಾರು ಭಕ್ತರು ಸೇರುವ ನಿರೀಕ್ಷೆಯಿದ್ದು, ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಮಂಟಪದಿಂದ ಲಕ್ಷ್ಮೀನಾರಾಯಣ ರಸ್ತೆ, ಮಾಧವಚಾರ್ ವೃತ್ತ, ಹಳೇ ಸೇತುವೆ, ಬಿ.ಎಚ್. ರಸ್ತೆ ಸೇರಿದಂತೆ ಮಾರುಕಟ್ಟೆ ರಸ್ತೆವರೆಗೂ ಮುಂಜಾನೆಯಿಂದ ರಾತ್ರಿವರೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನ ಪೂಜೆಗೆ ತೆರಳುತ್ತಾರೆ.
‘ಮಂಟಪ ಸೇರಿದಂತೆ ಸೇತುವೆ, ಬಿ.ಎಚ್.ರಸ್ತೆಯಲ್ಲಿ ಬಾಳೆ ದಿಂಡು, ಅಲಂಕೃತ ದೀಪಗಳು, ಅಲಂಕಾರಿಕ ವಸ್ತುಗಳನ್ನು ಕಟ್ಟಲಾಗಿದೆ. ಮಕ್ಕಳ ಆಟಿಕೆ, ಪೂಜಾ ಸಾಮಗ್ರಿ ಅಂಗಡಿಗಳಿಗೆ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದ್ದು, ಸಂಚಾರ ವ್ಯವಸ್ಥೆಗೆ ಅಡ್ಡಿಯಾಗದಂತೆ ಕ್ರಮವಹಿಸಲಾಗಿದೆ’ ಎಂದು ಶಿವರಾತ್ರಿ ಆಚರಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಹಾಲೇಶ್ ಬಿ.ಎ. ‘ಪ್ರಜಾವಾಣಿ’ಗೆ ತಿಳಿಸಿದರು.
ವಿಶೇಷ ಪೂಜೆ:
ತಾಲ್ಲೂಕು ವೀರಶೈವ ಲಿಂಗಾಯಿತ ಸೇವಾ ಸಮಿತಿ ವತಿಯಿಂದ ತರೀಕೆರೆಯ ಹಿರೇಮಠ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಇವರಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಫೆ.26ರಂದು ಬೆಳಿಗ್ಗೆ 4.30 ರಿಂದ ಪಶ್ಚಿಮ ವಾಹಿನಿ ಭದ್ರಾ ನದಿ ಮಂಟಪದಲ್ಲಿರುವ ಗಣಪತಿ ಸಂಗಮೇಶ್ವರ್, ನಂದಿ, ನಾಗದೇವತೆಗಳಿಗೆ ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ವೇದಿಕೆ ಕಾರ್ಯಕ್ರಮ:
ಮಂಟಪದ ಬದಿಯಲ್ಲಿಯೇ ವೇದಿಕೆ ಸಿದ್ಧಪಡಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶ್ ಕುಮಾರ್ ಭಾಗವಹಿಸಲಿದ್ದಾರೆ.
27ರಂದು ಬೆಳಿಗ್ಗೆ 7 ಗಂಟೆಗೆ ಕೋಟೆ ಬಸವಣ್ಣ ದೇವಸ್ಥಾನದಲ್ಲಿ ಕೆಂಡಾರ್ಚನೆ ಮಹೋತ್ಸವ ನಡೆಯಲಿದೆ. ಬನಶಂಕರಿ ಗಾಯನ ತಂಡದಿಂದ ಭಕ್ತಿ ಗೀತೆ ಏರ್ಪಡಿಸಲಾಗಿದ್ದು, ಸಂಜೆ 7 ಗಂಟೆಗೆ ಬಿ.ಕೆ.ಮೋಹನ್ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಸದಸ್ಯರಾದ ಚೆನ್ನೇಶ್, ಪ್ರಕಾಶ್ ಆರ್.ಎಂ.ಸಿ ತಿಳಿಸಿದರು.
‘ಭಕ್ತರು ನದಿಯ ನೀರು ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ನದಿ ಪಾತ್ರದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ’ ಎಂದು ನಗರಸಭೆ ಆಯುಕ್ತರಾದ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.