
ಭದ್ರಾವತಿ: ‘ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯವಾಗಿದ್ದು, ಜಗತ್ತಿಗೆ ತಾಯಿ ಪ್ರೀತಿ ಹಂಚಿದ ಮದರ್ ತೆರೇಸಾ ಹಾಗೂ ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇಂತಹ ಸಾಲಿನಲ್ಲಿ ನಿಲ್ಲುತ್ತಾರೆ’ ಎಂದು ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ ಮಾಲಕ್ಕ ಹೇಳಿದರು.
ಈಚೆಗೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಭಗವಂತನನ್ನು ನೋಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಾಯಿಯನ್ನು ಪ್ರತ್ಯಕ್ಷ ದೈವ ಎಂದು ಪೂಜಿಸಲಾಗುತ್ತದೆ. ಸಹಿಷ್ಣತೆ ಗುಣವುಳ್ಳ ತಾಯಿಯನ್ನು ಪ್ರಕೃತಿಯಲ್ಲಿ ಭೂಮಿ ಸೇರಿ ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ’ ಎಂದು ಉದಾಹರಣೆ ಸಹಿತ ವಿವರಿಸಿದರು.
‘ತಾಯಿಯನ್ನು ಮೊದಲ ಗುರು ಎಂದು ಪೂಜಿಸುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ತಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತಾಯಿಯ ಋಣ ತೀರಿಸಲು ಅಸಾಧ್ಯವಾಗಿದ್ದು, ಮಕ್ಕಳನ್ನು ಹೆತ್ತವರು ಕೊನೆಯ ಕಾಲದಲ್ಲಿ ನೋಡಿಕೊಳ್ಳುವುದು ಆದ್ಯ ಕರ್ತವ್ಯ’ ಎಂದು ನಗರಸಭೆ ಅಧ್ಯಕ್ಷ ಜೆ.ಸಿ ಗೀತಾ ರಾಜಕುಮಾರ್ ಹೇಳಿದರು.
ಎಸ್.ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ಹೇಮಾಶ್ರೀ, ಪುಷ್ಪಲತಾ ದೇವರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.