ADVERTISEMENT

ನೆಲ್ಲಿಸರ–ತೀರ್ಥಹಳ್ಳಿ ರಸ್ತೆ ಅಭಿವೃದ್ಧಿಗಾಗಿ 1,249 ಮರಗಳಿಗೆ ಕೊಡಲಿ?

3.20 ಕಿ.ಮೀ. ರಸ್ತೆ ಉಳಿತಾಯಕ್ಕೆ ಯೋಜನೆ; ಮರಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 8:50 IST
Last Updated 21 ಫೆಬ್ರುವರಿ 2025, 8:50 IST
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಗೆ ನೆರಳು ನೀಡುತ್ತಿದ್ದ ಮರಗಳು
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಗೆ ನೆರಳು ನೀಡುತ್ತಿದ್ದ ಮರಗಳು   

ತೀರ್ಥಹಳ್ಳಿ: ಕೇವಲ 3.20 ಕಿ.ಮೀ ಪ್ರಯಾಣ ಅಂತರದ ಉಳಿತಾಯಕ್ಕಾಗಿ 1,249 ಮರಗಳನ್ನು ತೆರವು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುತಿಸಿದ್ದು, ರಸ್ತೆ ಅಭಿವೃದ್ಧಿ ಕೈಗೊಳ್ಳಲಿದೆ.

ರಾಷ್ಟ್ರೀಯ ಹೆದ್ದಾರಿ 169 ಮಾರ್ಗ ಮಧ್ಯದ ನೆಲ್ಲಿಸರ – ತೀರ್ಥಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿ ₹ 340 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಸದ್ಯ ನೆಲ್ಲಿಸರದಿಂದ ತೀರ್ಥಹಳ್ಳಿಯ ಕೊಪ್ಪ ವೃತ್ತದವರೆಗೆ 31 ಕಿ.ಮೀ. ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರುತ್ತಿದ್ದು, ಇನ್ನಷ್ಟು ಮರಗಳು ಧರೆಗುರುಳುವ ಸಾಧ್ಯತೆ ದಟ್ಟವಾಗಿದೆ.

ರಸ್ತೆ ನಿರ್ಮಾಣದಿಂದಾಗಿ ಶಿವಮೊಗ್ಗ– ತೀರ್ಥಹಳ್ಳಿ ಅಂತರ 53.50 ಕಿ.ಮೀ.ಗೆ ಇಳಿಯುವ ನಿರೀಕ್ಷೆ ಹೊಂದಲಾಗಿದೆ. (ಈಗಿರುವ ಅಂತರ 57 ಕಿ.ಮೀ). ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಒಟ್ಟು ಕಾಮಗಾರಿಗೆ ₹ 576 ಕೋಟಿ ನಿಗದಿಪಡಿಸಿದೆ. ಇದಕ್ಕೆ ಹೊಂದಿಕೊಂಡಂತೆ ಭಾರತೀಪುರ ಫ್ಲೈ ಓವರ್‌ ಕಾಮಗಾರಿ ₹ 56 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಕುಶಾವತಿ ಹೊಸ ಸೇತುವೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ADVERTISEMENT

ಎಲ್ಲೆಲ್ಲಿ ಮರಗಳಿಗೆ ಕೊಡಲಿ:

ತೀರ್ಥಹಳ್ಳಿ ವಲಯಾರಣ್ಯ ವ್ಯಾಪ್ತಿಯಲ್ಲಿ ಸರ್ಕಾರಿ ರಸ್ತೆ ಪರಿಮಿತಿಯಲ್ಲಿ 414 ಹಾಗೂ ಖಾಸಗಿ, ಹಿಡುವಳಿ ಪ್ರದೇಶದಲ್ಲಿ 177, ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯಲ್ಲಿ ಸರ್ಕಾರಿ ರಸ್ತೆ ಪರಿಮಿತಿಯಲ್ಲಿ 461, ಹಾಗೂ ಖಾಸಗಿ, ಹಿಡುವಳಿ ಪ್ರದೇಶದಲ್ಲಿ 197 ಮರಗಳನ್ನು ಗುರುತಿಸಲಾಗಿದೆ. ಒಟ್ಟು ಎರಡು ವಲಯಾರಣ್ಯ ವ್ಯಾಪ್ತಿಯಲ್ಲಿ 1,249 ಮರಗಳನ್ನು ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದೆ. ಮಂಡಗದ್ದೆ, ತೂದೂರು, ಬೆಜ್ಜವಳ್ಳಿ, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ವಿಸ್ತರಣೆಗೆ ಸಂಬಂಧಪಟ್ಟಂತೆ ಹೆದ್ದಾರಿ ಪ್ರಾಧಿಕಾರ ಅಹವಾಲು ಸಭೆ ನಡೆಸಿದೆ.

ಒಳಗೊಳ್ಳದ ಅರಣ್ಯ ಪ್ರದೇಶ:

1,249‌ ಮರಗಳನ್ನು ಸರ್ಕಾರಿ ರಸ್ತೆ ಪರಿಮಿತಿ, ಖಾಸಗಿ, ಹಿಡುವಳಿ ಪ್ರದೇಶದಲ್ಲಿ ಮಾತ್ರ ಗುರುತಿಸಲಾಗಿದೆ. ಅರಣ್ಯ, ಸೊಪ್ಪಿನಬೆಟ್ಟ ಮತ್ತು ಇನ್ನಿತರೆ ಅರಣ್ಯ ಸ್ವರೂಪದ ಪ್ರದೇಶಗಳನ್ನು ಒಳಗೊಂಡಿಲ್ಲ. ಅಂತಹ ಪ್ರದೇಶಗಳ ಮರಗಳನ್ನು ರಸ್ತೆ ವಿಸ್ತರಣೆಗೆ ಕಡಿತಲೆ ಮಾಡಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಮಂತ್ರಾಲಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬೇಕಿದೆ. ಹೆದ್ದಾರಿ ಪ್ರಾಧಿಕಾರ ಸಲ್ಲಿಸಿರುವ ಮನವಿ ಪರಿಷ್ಕರಣೆ ಹಂತದಲ್ಲಿದೆ. ಅರಣ್ಯ ಸ್ವರೂಪದ ಪ್ರದೇಶ ಒಳಗೊಂಡರೆ ಮರಗಳ ಕಡಿತಲೆ ಪ್ರಮಾಣ ದ್ವಿಗುಣವಾಗಲಿದೆ.

ಮದುಸೂಧನ್
ಎಸ್.ಟಿ.ದೇವರಾಜ್

ಫೆ. 27ರಂದು ಸಾರ್ವಜನಿಕ ಆಕ್ಷೇಪಣೆಗೆ ಅಹವಾಲು ಸಭೆ ಕರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೋರಿಕೆ ಮೇರೆಗೆ ಸರ್ಕಾರಿ ಖಾಸಗಿ ಪ್ರದೇಶದ 1249 ಮರಗಳನ್ನು ಗುರುತಿಸಲಾಗಿದೆ. ಮದುಸೂಧನ್‌ ಎಸಿಎಫ್‌ ತೀರ್ಥಹಳ್ಳಿ

ಮರಗಳ ಮಾರಣ ಹೋಮಕ್ಕೆ ಅಭಿವೃದ್ಧಿಯ ನೆಪ ಒಡ್ಡಲಾಗುತ್ತಿದೆ. ಮುಳುಗಡೆಯಿಂದ ಪಾಠ ಕಲಿಯದ ಆಡಳಿತ ಹೆದ್ದಾರಿ ಹೆಸರಲ್ಲಿ ಮಲೆನಾಡಿನ ಸಹಜ ಪ್ರಕೃತಿ ಹಾಳು ಮಾಡುತ್ತಿದೆ ಎಸ್.ಟಿ.ದೇವರಾಜ್‌ ರೈತ ಹೋರಾಟಗಾರ ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.