ADVERTISEMENT

ಸಿಗಂದೂರು ದೇವಸ್ಥಾನ ವಿವಾದ: ನ್ಯಾಯಾಲಯದಿಂದ ರಾಜಿ ಸಂಧಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 15:18 IST
Last Updated 21 ಅಕ್ಟೋಬರ್ 2020, 15:18 IST
ಸಿಂಗದೂರು ದೇವಿ (ಸಂಗ್ರಹ ಚಿತ್ರ)
ಸಿಂಗದೂರು ದೇವಿ (ಸಂಗ್ರಹ ಚಿತ್ರ)   

ಸಾಗರ: ತಾಲ್ಲೂಕಿನ ಸಿಗಂದೂರು ದೇವಾಲಯದ ವಿವಾದಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಏರ್ಪಟ್ಟಿದೆ.

ದೇವಸ್ಥಾನದ ಪೂಜಾ ವಿಧಿ ವಿಧಾನಗಳನ್ನು ನಡೆಸಲು ಅರ್ಚಕ ಶೇಷಗಿರಿ ಭಟ್ ಅವರಿಗೆ ಯಾವುದೇ ಅಡ್ಡಿ ಆತಂಕ ಉಂಟು ಮಾಡಬಾರದು ಎಂದು ಧರ್ಮದರ್ಶಿ ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್ ವಿರುದ್ಧ ದೇವಸ್ಥಾನದ ಭಕ್ತರಾದ ಸಂದೀಪ್, ನವೀನ್ ಜೈನ್ ಎಂಬುವವರು ನಿರ್ಬಂಧಕಾಜ್ಞೆ ಪರಿಹಾರ ಕೋರಿ ದಾವೆ ದಾಖಲಿಸಿದ್ದರು. ಈ ದಾವೆಯಲ್ಲಿ ಶೇಷಗಿರಿ ಭಟ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ನ್ಯಾಯಾಧೀಶರಾದ ಫೆಲಿಕ್ಸ್ ಅಲ್ಪಾನ್ಸೊ ಅಂತೋನಿ ಅವರು ರಾಜಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ಪಕ್ಷಗಾರರನ್ನು ನ್ಯಾಯಾಲಯಕ್ಕೆ ಕರೆಸುವಂತೆ ಸಂಬಂಧಪಟ್ಟ ವಕೀಲರಿಗೆ ಸೂಚನೆ ನೀಡಿದ್ದರು.

ADVERTISEMENT

ಈ ಪ್ರಕಾರ ದಾವೆ ದಾಖಲಿಸಿದ್ದ ಸಂದೀಪ್, ನವೀನ್ ಜೈನ್, ರಾಮಪ್ಪ, ರವಿಕುಮಾರ್, ಶೇಷಗಿರಿ ಭಟ್ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮಧ್ಯಸ್ಥಗಾರರ ಮೂಲಕ ಉಭಯ ಪಕ್ಷಗಾರರ ಅಹವಾಲು ಆಲಿಸಿದ ನಂತರ ರಾಜಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.

ದಸರಾ ಅಂಗವಾಗಿ ದೇವಸ್ಥಾನದಲ್ಲಿ ಹೋಮವನ್ನು ಶೇಷಗಿರಿ ಭಟ್ ಹಾಗೂ ರಾಮಪ್ಪ ಅವರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ನಡೆಸಬೇಕು. ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂಬ ಜಂಟಿ ಮೆಮೊಗೆ ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ.

ಕೋವಿಡ್ ಪಿಡುಗು ಮುಕ್ತಾಯವಾದ ನಂತರ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಪರಸ್ಪರ ಹೊಂದಾಣಿಕೆ ಮೂಲಕ ದೇವಸ್ಥಾನದ ಪೂಜೆ ಹಾಗೂ ಇತರೆ ಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಮ್ಮತಿ ಸೂಚಿಸಿದ್ದಾರೆ.

ಕೋವಿಡ್-19 ಮುಗಿಯುವವರೆಗೂ ಗರ್ಭಗುಡಿಯಲ್ಲಿ ಏಕ ಕಾಲದಲ್ಲಿ 40 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಆರತಿ ತಟ್ಟೆಯನ್ನು ಎಲ್ಲಾ ಭಕ್ತರ ಬಳಿ ಕೊಂಡೊಯ್ಯದೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಬೇಕು. ಕೋವಿಡ್ ಪಿಡುಗು ಮುಕ್ತಾಯವಾದ ನಂತರ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಪರಸ್ಪರ ಹೊಂದಾಣಿಕೆ ಮೂಲಕ ದೇವಸ್ಥಾನದ ಪೂಜೆ ಹಾಗೂ ಇತರೆ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಸಮ್ಮತಿ ಸೂಚಿಸಿದ್ದಾರೆ. ಇದರ ಮೇರೆಗೆ ದಾವೆ ದಾಖಲಿಸಿದ್ದವರು ತಮ್ಮ ದಾವೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ವಾದಿಗಳಾದ ಸಂದೀಪ್, ನವೀನ್ ಜೈನ್ ಪರವಾಗಿ ವಕೀಲರಾದ ರವೀಶ್ ಕುಮಾರ್, ಪ್ರತಿವಾದಿಗಳಾದ ರಾಮಪ್ಪ, ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಎಚ್.ಎಲ್.ದಿವಾಕರ್, ಬಿ.ನಾಗರಾಜ್, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ, ಮಧ್ಯಸ್ಥಗಾರರಾಗಿ ವಕೀಲರಾದ ಮರಿದಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.