ಸಾಗರ: ರಾಜ್ಯ ಸರ್ಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆಯನ್ನು ಬಿಜೆಪಿಯು ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಆಯೋಜಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆಯಿಂದ ದೂರ ಉಳಿದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ತಿಳಿಸಿದ್ದಾರೆ.
ಸಿಗಂದೂರು ಸೇತುವೆಗೆ ಹಣ ಮೀಸಲಿಡಬೇಕು ಎಂದು ಮೊದಲ ಬಾರಿಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದವರು ಬೇಳೂರು. ಸೇತುವೆಗೆ ಸಂಬಂಧಿಸಿದ ಯಾವ ಕೆಲಸ ಮಾಡದ ಮಾಜಿ ಸಚಿವ ಹಾಲಪ್ಪ ಹರತಾಳು ಈಗ ಅದರ ಲಾಭ ಪಡೆಯಲು ಹೊರಟಿರುವುದು ಹಾಸ್ಯಾಸ್ಪದ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
‘ಪಕ್ಷಾತೀತ ಕಾರ್ಯಕ್ರಮ ಮಾಡುವ ಉದ್ದೇಶವಿದ್ದರೆ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಸಾಗರದ ಶಾಸಕರೊಂದಿಗೆ ಉದ್ಘಾಟನೆ ದಿನಾಂಕ ಘೋಷಣೆ ಮಾಡಬೇಕಿತ್ತು. ಎಲ್ಲ ಹಂತಗಳಲ್ಲೂ ಕಡೆಗಣಿಸಿ ಈಗ ಕಾಂಗ್ರೆಸ್ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಜಿಲ್ಲೆಯ ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
‘ನಾನು ಎಪಿಎಂಸಿ ಅಧ್ಯಕ್ಷನಾಗಿದ್ದಾಗ ಸಂತೆ ಮಾರುಕಟ್ಟೆ ಉದ್ಘಾಟನೆಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಲು ಮುಂದಾಗಿದ್ದಾಗ ತಮ್ಮ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಎಂದು ಅದಕ್ಕೆ ಹಾಲಪ್ಪ ಅಡ್ಡಿಪಡಿಸಿದ್ದರು’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಹೇಳಿದರು.
ಪ್ರಮುಖರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೋಮಶೇಖರ ಲ್ಯಾವಿಗೆರೆ, ಸೈಯದ್ ಜಾಕೀರ್, ಗಿರೀಶ್ ಕೋವಿ, ಆನಂದ ಭೀಮನೇರಿ, ಡಿ.ದಿನೇಶ್, ಮಹಾಬಲ ಕೌತಿ, ವಿಲ್ಸನ್ ಗೊನ್ಸಾಲ್ವಿಸ್, ನಾರಾಯಣಪ್ಪ, ಎಲ್.ಚಂದ್ರಪ್ಪ, ಕನ್ನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.