ADVERTISEMENT

ಅಂಬಾರಗೋಡ್ಲು-ಕಳಸವಳ್ಳಿ ನೂತನ ತೂಗುಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ನಾಮಕರಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 11:25 IST
Last Updated 14 ಜುಲೈ 2025, 11:25 IST
   

ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನ ನೂತನ ತೂಗು ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲಾಗುವುದು ಎಂದು ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದರು.

ನೂತನ ಸೇತುವೆ ಲೋಕಾರ್ಪಣೆ ನಂತರ ಸೋಮವಾರ ಸಾಗರದ ನೆಹರೂ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

'ಸೇತುವೆ ನಿರ್ಮಾಣದ ಕೆಲಸ ನನ್ನಿಂದ ಆಗಿಲ್ಲ. ಬದಲಿಗೆ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಆಗಿದೆ. ಹೀಗಾಗಿ ಆ ತಾಯಿಯ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಆ ಮೂಲಕ ಈ ಭಾಗದ ಜನರ ಭಾವನೆಗಳನ್ನು ಗೌರವಿಸಲಾಗುತ್ತಿದೆ' ಎಂದರು.

ADVERTISEMENT

ಇಲ್ಲಿಯವರೆಗೂ ಸ್ಥಳೀಯರು 100 ಕಿ.ಮೀನಷ್ಟು ದೂರ ಕ್ರಮಿಸಿ ಹೊರಗಿನ ಜಗತ್ತಿನ ಸಂಪರ್ಕ ಪಡೆಯಬೇಕಿತ್ತು. ಸೇತುವೆ ನಿರ್ಮಾಣದಿಂದ ಅಲ್ಲಿನ ಜನರ ಬವಣೆಗಳನ್ನು ಶಾಶ್ವತವಾಗಿ ನೀಗಿಸಿದ ತೃಪ್ತಿ ಇದೆ. ಅದಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದ ಕಾರಣ ಎಂದು ಪುನರುಚ್ಚರಿಸಿದರು.

ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯಿಂದ 2030ರ ಡಿಸೆಂಬರ್ ವೇಳೆಗೆ ಕರ್ನಾಟಕದಲ್ಲಿ ₹5 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಹಾಗೂ ಮೂಲಸೌಕರ್ಯ ನಿರ್ಮಾಣ ಕಾರ್ಯದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯದ ವಿವಿಧೆಡೆ 2056 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಗುರುರಾಜ ಗಂಟಿಹೊಳಿ, ಸಿಮೆಂಟ್ ಮಂಜು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಮಾಜಿ ಸಚಿವರಾದ ಕಾಗೋಡು ತಿಮಪ್ಪ, ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.