ADVERTISEMENT

ಸಿಗಂದೂರು: ಜಾತ್ರಾ ಮಹೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:47 IST
Last Updated 16 ಜನವರಿ 2026, 4:47 IST
ಸಿಗಂದೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಜಾನಪದ ಗಾಯನ ನಡೆಯಿತು
ಸಿಗಂದೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಜಾನಪದ ಗಾಯನ ನಡೆಯಿತು   

ತುಮರಿ: ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಎರಡನೇ ದಿನವೂ ದೇವಿಗೆ ವಿಶೇಷ ಪೂಜೆ ನೇರವೇರಿತು.

ಗುರುವಾರ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅರ್ಚನೆ, ನವ ಚಂಡಿಕಾ ಹೋಮ ನೆರವೇರಿತು. ದೇವಸ್ಥಾನದ ಧರ್ಮದರ್ಶಿ ಎಸ್. ರಾಮಪ್ಪ ದಂಪತಿ ಕುಟುಂಬ ಸಮೇತರಾಗಿ ಚಂಡಿಕಾ ಹವನ ಪೂರ್ಣಾಹುತಿಯಲ್ಲಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಾಕಪ್ಪ ಕಣ್ಣೂರು ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

ADVERTISEMENT

ಜಾತ್ರೆಯ ಅಂಗವಾಗಿ ತುಮರಿಯ ಸಿಗಂದೂರೇಶ್ವರಿ ಕಲಾ ತಂಡದಿಂದ ಜನಪದ ಗೀತಾ ಗಾಯನ, ಸ್ಥಳೀಯ ಭಜನಾ ಮಂಡಳಿ ತಂಡದಿಂದ ಭಜನೆ ನಡೆಯಿತು.

ಭಕ್ತಸಾಗರ:

ಎರಡನೇ ದಿನದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು, ಅಕ್ಕಿ, ಬೆಲ್ಲ ಅರ್ಪಿಸಿ ಹರಕೆ ಪೂಜೆ ಸಲ್ಲಿಸಿ, ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ ದಾಸೋಹದಲ್ಲಿ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳು ಸಂಖ್ಯೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ದೇವಸ್ಥಾನ ಸಮಿತಿಯು ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಿತ್ತು.

ಪಟ್ಲ ಸತೀಶ್ ಶೆಟ್ಟರ ಭಾಗವತಿಕೆಯ ಪಾವಂಜೆ ಮೇಳದಿಂದ ಶ್ರೀದೇವಿ ಲಲಿತೋಪಾಖ್ಯಾನ ಯಕ್ಷಗಾನ ನೋಡಲು ಆಪಾರ ಜನಸ್ತೋಮ ಕಂಡುಬಂತು. ದೇವಸ್ಥಾನದಲ್ಲಿ ದುರ್ಗಾ ದೀಪ ನಮಸ್ಕಾರ, ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು.

ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಸಂಕ್ರಮಣ ಜಾತ್ರೆಯು ಸಂಪನ್ನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.