ADVERTISEMENT

ಸರಳ ವಿವಾಹದಿಂದ ಸದೃಢ ಜೀವನ

ಗರ್ತಿಕೇರಿ ನಾರಾಯಣ ಗುರು ಮಠದ ರೇಣುಕಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:30 IST
Last Updated 14 ಮೇ 2022, 2:30 IST
ಸೊರಬದಲ್ಲಿ ವಿಶ್ವಮಾನವ ಸತ್ಯಶೋಧಕ ಟ್ರಸ್ಟ್ ವತಿಯಿಂದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸೊರಬದಲ್ಲಿ ವಿಶ್ವಮಾನವ ಸತ್ಯಶೋಧಕ ಟ್ರಸ್ಟ್ ವತಿಯಿಂದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.   

ಪ್ರಜಾವಾಣಿ ವಾರ್ತೆ

ಸೊರಬ: ಸರಳ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ವೈಚಾರಿಕ ಮನೋಭಾವ ಬೆಳೆಸುವ ಜೊತೆಗೆ ಸಾಂಸಾರಿಕ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ಭವಿಷ್ಯದಲ್ಲಿ ಸದೃಢ ಜೀವನ ನಡೆಸಲು ನವದಂಪತಿಗೆ ಸಹಕಾರಿಯಾಗಲಿದೆ ಎಂದು ಗರ್ತಿಕೇರಿ ನಾರಾಯಣ ಗುರು ಮಠದ ರೇಣುಕಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿಶ್ವಮಾನವ ಸತ್ಯಶೋಧಕ ಟ್ರಸ್ಟ್, ಕೊಡಕಣಿ ಹಾಗೂ ಕಾಗೋಡು ಗ್ರಾಮಗಳ ಸಲಹಾ ಸಮಿತಿ ಆಶ್ರಯದಲ್ಲಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ADVERTISEMENT

ಆಧುನಿಕ ಕಾಲಘಟ್ಟದಲ್ಲಿ ವಿವಾಹಗಳು ಅದ್ದೂರಿಯಾಗಿ ನಡೆಯುತ್ತಿರುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಹದೆಗೆಡಲು ಕಾರಣವಾಗಿದೆ. ಇದರಿಂದ ಮುಂದಿನ ಪೀಳಿಗೆಗೂ ಉತ್ತಮವಾದ ಆರ್ಥಿಕ ನೆಲೆ ದೊರೆಯದೇ ಹಿಂದುಳಿದ ಕುಟುಂಬ
ಗಳು ಸಮಾಜದಲ್ಲಿ ವ್ಯವಸ್ಥಿತವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರು 18ನೇ ಶತಮಾನದಲ್ಲಿಯೇ ಅದ್ದೂರಿ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ಅಡಂಬರದ ವಿವಾಹ ಮಾಡುವ ಬದಲು ವಧು–ವರರಿಗೆ ವ್ಯಾಪಾರ, ವಹಿವಾಟು ಕೈಗೊಳ್ಳಲು ಬಂಡವಾಳ ಹೂಡಿದರೆ ಬದುಕಿನಲ್ಲಿ ಆ ದಂಪತಿಗೆ ಅಭದ್ರತೆ ಕಾಡುವುದಿಲ್ಲ ಎಂದು ತಿಳಿಸಿದರು.

ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಅವರ ಪುತ್ರ ರಾಮಮನೋಹರ ಕಾರ್ಯಕ್ರಮ ಉದ್ಘಾಟಿಸಿ, ‘ನಮ್ಮ ತಂದೆ ಗೇಣಿದಾರರ ಪರವಾಗಿ ಹೋರಾಟ ಮಾಡಿದ ಸವಿನೆನಪಿಗಾಗಿ ಟ್ರಸ್ಟ್ ವತಿಯಿಂದ ಭಗವಂತ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನಾನು 4 ವರ್ಷದ ಮಗುವಿದ್ದಾಗಲೇ ನಮ್ಮ ತಂದೆಯನ್ನು ಕಳೆದುಕೊಂಡಿದ್ದೆ. ತಂದೆಯ ಹೋರಾಟವನ್ನು ಪುಸ್ತಕ ನೋಡಿ ತಿಳಿದುಕೊಂಡಿದ್ದೇನೆ. ಅವರ 100ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಸಮಾಜವಾದಿ ಹಾಗೂ ಕಾಗೋಡು ಹೋರಾಟದ ಬಗ್ಗೆ ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕುಟುಂಬದ ವತಿಯಿಂದ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಶಿಕಲಾ ಹಾಗೂ ಸಂಗಡಿಗರು ಸರ್ವಧರ್ಮ ಸಮನ್ವಯತೆ ಗೀತೆಗಳನ್ನು ಹಾಡಿದರು. ಮಂಜಪ್ಪ ಸ್ವಾಗತಿಸಿ ಉಪನ್ಯಾಸಕ ನೀಲೇಶ್ ನಿರೂಪಿಸಿದರು. ಸಮಾಜ ಚಿಂತಕ ರಾಜಪ್ಪ ಮಾಸ್ತರ್, ಜನಪರ ಹೋರಾಟಗಾರ ಶಿವಾನಂದ ಕುಗ್ವೆ, ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ, ಉದ್ಯಮಿ ಪ್ರಸನ್ನಕುಮಾರ್, ನಾಗಪ್ಪ, ಹನುಮಂತಪ್ಪ ಮಾಸ್ತರ್, ಲಕ್ಷ್ಮಣರಾವ್, ರವಿಕುಮಾರ್, ಶೋಭಾ, ಸುಶೀಲಾ ಇಂದೂಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.