ADVERTISEMENT

ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ: ಆರೋಪ

ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 6:32 IST
Last Updated 7 ಆಗಸ್ಟ್ 2022, 6:32 IST
ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಶಿವಮೊಗ್ಗದಲ್ಲಿ ನಾಗರಿಕ ವೇದಿಕೆಯಿಂದ ಶನಿವಾರ ಪ್ರತಿಭಟನೆ ನಡೆಯಿತು
ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಶಿವಮೊಗ್ಗದಲ್ಲಿ ನಾಗರಿಕ ವೇದಿಕೆಯಿಂದ ಶನಿವಾರ ಪ್ರತಿಭಟನೆ ನಡೆಯಿತು   

ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಶನಿವಾರ ಗೋಪಾಲಗೌಡ ಬಡಾವಣೆ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಲಾಯಿತು.

ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರ ಮುಗಿಯುತ್ತಿಲ್ಲ. ಇಲ್ಲಿನ ಅವೈಜ್ಞಾನಿಕ ಕಾಮಗಾರಿಗಳಿಂದಾಗಿಯೇ ನಗರದಲ್ಲಿ ಸಣ್ಣ ಮಳೆಯಾದರೆ ಸಾಕು, ಜನವಸತಿಗಳು ಜಲಾವೃತಗೊಳ್ಳುತ್ತವೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗುತ್ತದೆ. ಅನೇಕ ಕಡೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಾಮಗಾರಿ ಮುಗಿದ ಕಡೆಯಲ್ಲಿನ ಫುಟ್‌ಪಾತ್‌ಗಳನ್ನು ಮತ್ತೆ ಮತ್ತೆ ತೆಗೆದು ದುರಸ್ತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಗುತ್ತಿಗೆದಾರಯಾರು ಎಂದು ಗೊತ್ತಾಗುವುದಿಲ್ಲ. ಯಾರೋ ಬರುತ್ತಾರೆ. ಅಧಿಕಾರಿಗಳು ಕೆಲಸ ನೋಡದೇ ಶಿಫಾರಸು ಮಾಡುತ್ತಾರೆ. ಆತ ಹಣ ಬಾಚಿಕೊಳ್ಳುತ್ತಾನೆ. ಕೆಲಸ ಮಾತ್ರ ಅಸ್ತವ್ಯಸ್ಥವಾಗಿರುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

‘ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಜನಪ್ರತಿನಿಧಿಗಳಿಗೂ ದೂರು ನೀಡಲಾಗಿದೆ. ಇಷ್ಟಾದರೂ ಅವ್ಯವಸ್ಥೆ ಮುಂದುವರಿದಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಅವೈಜ್ಞಾನಿಕ ಕಾಮಗಾರಿಗಳಿಂದಾಗುವ ತೊಂದರೆ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ಜಿ.ಡಿ. ಮಂಜುನಾಥ್, ಸೀತಾರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.