ADVERTISEMENT

ಸಾಮಾನ್ಯ ಜನರ ಸಂಕಷ್ಟ ಅರಿತಿದ್ದ ನಾಯಕ ಬಂಗಾರಪ್ಪ: ಎಸ್.ಜಿ.ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ 93ನೇ‌ ಜನ್ಮದಿನಾಚರಣೆ, ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 9:04 IST
Last Updated 26 ಅಕ್ಟೋಬರ್ 2025, 9:04 IST
   

ಶಿವಮೊಗ್ಗ: 'ಜನರ ಮಧ್ಯದಿಂದ ಅಧಿಕಾರಕ್ಕೆ ಹೋಗಿ ಅಲ್ಲಿ ಕಣ್ಣು,‌ ಕಿವಿ, ನೆನಪಿನ ಶಕ್ತಿ ಕಳೆದುಕೊಳ್ಳುವ ಜನ ಪ್ರತಿನಿಧಿಗಳ ನಡುವೆ ಜನರ ಪರವಾಗಿ ನಿಂತು ಯೋಜನೆಗಳ ರೂಪಿಸಿದವರಲ್ಲಿ ಎಸ್. ಬಂಗಾರಪ್ಪ, ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ' ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಎಸ್.ಬಂಗಾರಪ್ಪ ಫೌಂಡೇಶನ್ ಹಾಗೂ ವಿಚಾರ ವೇದಿಕೆಯ ಆಶ್ರಯದಲ್ಲಿ ಸೊರಬದಲ್ಲಿ ಆಯೋಜಿಸಿದ್ದ 'ಬಂಗಾರಪ್ಪನವರ ಚಿಂತನೆಗಳು, ಸುಸ್ಥಿರ ಬದುಕು ಪ್ರಸ್ತುತತೆ' ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಸಮಾಜವಾದಿ ಚಳವಳಿ ಕೇವಲ ತಾತ್ವಿಕ ಚಿಂತನೆ ಅಲ್ಲ. ಅದರ ಆಶಯಗಳು ಅನುಷ್ಠಾನಕ್ಕೆ ಬರಬೇಕು ಎಂದು ಪ್ರಯತ್ನಿಸಿದವರು ಬಂಗಾರಪ್ಪ. ಅದರ ಫಲವಾಗಿ ಆಶ್ರಯ ಯೋಜನೆ ಮೂಲಕ ಆರು ತಿಂಗಳಲ್ಲಿ ಎಂಟು ಲಕ್ಷ ಜನರಿಗೆ ವಸತಿ ಕಲ್ಪಿಸಿದರು. ಬಡವರ ದೇವರಿಗೆ ನೆರವಾಗಲು ಆರಾಧನ, ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಖಾತರಿಗೆ ಶುಶ್ರೂಷೆ, ಗುಡಿ ಕೈಗಾರಿಕೆಗಳಿಗೆ ಉತ್ತೇಜನದ ಮೂಲಕ ಅಧಿಕಾರದ ವಿಕೇಂದ್ರೀಕರಣಕ್ಕೆ ವಿಶ್ವ ಯೋಜನೆ, ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ಅವರ ಹೆಜ್ಜೆ ಗುರುತುಗಳಾದವು ಎಂದರು.

ADVERTISEMENT

'ಬಂಗಾರಪ್ಪ ಅವರ ಚಿಂತನೆಗಳ ಸಾಕಾರವನ್ನು ಸ್ಮರಿಸದೇ ಹೋದರೆ ಅವರ ನಡೆನುಡಿ ಸಿದ್ಧಾಂತದ ಅವಲೋಕನ ಮಾಡದೇ ಇದ್ದರೆ ಆತ್ಮದ್ರೋಹವಾಗುತ್ತದೆ.

ಬೇಲಿಯೇ ಎದ್ದು ಹೊಲ ಮೇಯುವ ಇಂದಿನ ವಾತಾವರಣದಲ್ಲಿ ಜಗತ್ತಿನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಬಿತ್ತಿದವರು ಉರಿಬೂದಿಯನ್ನು ನೆಲಕ್ಕೆ ಸುರಿದು ಅದರ ಜೀವಸತ್ವ ನಾಶ ಮಾಡುತ್ತಿದ್ದಾರೆ. ಇಂತಹ ದುರ್ಮೋಹದ ಹೊತ್ತಿನಲ್ಲಿ ನಿಸರ್ಗಕ್ಕೆ ಹೆಚ್ಚು ನಿಷ್ಠವಾದ ಅದರ ಧರ್ಮಕ್ಕೆ ಪೂರಕವಾಗಿ ನಡೆಯುವ

ನಿಯತ್ತಿನ ಜಂಗಮತ್ವವೇ ಸುಸ್ಥಿರ. ಅದು ಪ್ರಭುತ್ವಕ್ಕೂ ಬರಬೇಕು. ಅದಕ್ಕೆ ಪೂರಕವಾಗಿ ನಡೆನುಡಿ ಸಿದ್ಧಾಂತಕ್ಕೆ ಬದ್ಧವಾಗಿ ಸಾರ್ವಜನಿಕ ಬದುಕು ಕಟ್ಟಿದವರು ಬಂಗಾರಪ್ಪ' ಎಂದು ಸ್ಮರಿಸಿದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಶೋಷಿತರನ್ನು ಸಬಲಗೊಳಿಸಲು ಬಂಗಾರಪ್ಪ ಅಂದು ಬಿತ್ತಿದ್ದ ಸಮಾಜವಾದಿ ಚಿಂತನೆಗಳೆಂಬ ಬೀಜದ ಫಲವೇ ರಾಜ್ಯ ಸರ್ಕಾರದ ಇಂದಿನ ಗ್ಯಾರಂಟಿ ಯೋಜನೆಗಳು ಎಂದು ಹೇಳಿದರು.

'ಶಾಂತವೇರಿ ಗೋಪಾಲಗೌಡರ ದೊಡ್ಡ ಪ್ರಭಾವ ಬಂಗಾರಪ್ಪ ಅವರ ಮೇಲೆ ಆಗಿತ್ತು. ಮುಖ್ಯಮಂತ್ರಿ ಆಗಿದ್ದಾಗ ಮಾತ್ರವಲ್ಲ ಜೀವನಪೂರ್ತಿ ಸಮಾಜವಾದದ ಆಶಯಗಳನ್ನೇ ಸಾಕಾರಕ್ಕೆ ಪ್ರಯತ್ನಿಸಿದ ಬಂಗಾರಪ್ಪ, ಬಲಾಢ್ಯರ ಅಧಿಕಾರದಿಂದ ಶೋಷಿತರ ಕೈಗೆ ಒಪ್ಪಿಸುವ ದೊಡ್ಡ ಕೆಲಸ ಮಾಡಿದ್ದರು' ಎಂದು ಸ್ಮರಿಸಿದರು.

ವಿಚಾರ ಸಂಕಿರಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್ ಹಾಜರಿದ್ದರು. ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.