
ಸೊರಬ: ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ, ಅವರ ತ್ಯಾಗ ಮತ್ತು ಬಲಿದಾನದಿಂದ ದೇಶ ಸುಭಿಕ್ಷವಾಗಿದೆ. ಅವರನ್ನು ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದ ವೀರಭದ್ರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಜಮ್ಮುಗೆ ಪ್ರವಾಸಕ್ಕೆ ತೆರಳಿದವರನ್ನು ಉಗ್ರಗಾಮಿಗಳು ಕ್ರೂರವಾಗಿ ಹತ್ಯೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ ಅವರು, ‘ನಮ್ಮಲ್ಲಿ ಎಷ್ಟೇ ಶ್ರೀಮಂತಿಕೆ ಇದ್ದರೂ ದೇಶದ ಭದ್ರತೆ ಮತ್ತು ಸೈನಿಕರ ಶ್ರಮವಿಲ್ಲದೆ ನೆಮ್ಮದಿಯ ಜೀವನ ಸಾಧ್ಯವಿಲ್ಲ. ಇಲ್ಲಿಯೇ ವಾಸವಿದ್ದು ದೇಶಕ್ಕೆ ದ್ರೋಹ ಬಗೆಯುವವರನ್ನು ಸದೆ ಬಡಿಯಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಆಪರೇಷನ್ ಸಿಂಧೂರ ಮೂಲಕ ಸೈನಿಕರ ಗೌರವವನ್ನು ಎತ್ತಿ ಹಿಡಿದು ದೇಶದ ಹಿತ ಕಾಯುತ್ತಿದ್ದಾರೆ’ ಎಂದು ತಿಳಿಸಿದರು.
ಚಂದ್ರಗುತ್ತಿ ಗ್ರಾಮದ ಬಸ್ ತಂಗುದಾಣದ ಅಭಿವೃದ್ಧಿಗೆ ₹3.5 ಲಕ್ಷ ಮತ್ತು ಬರದವಳ್ಳಿ ಗ್ರಾಮದ ರುದ್ರಭೂಮಿಗೆ ತೆರಳುವ ಮಾರ್ಗದಲ್ಲಿ ಫುಟ್ ಬ್ರಿಡ್ಜ್ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಆರಂಭವಾಗಲಿವೆ. ಸೊರಬಕ್ಕೆ ರೈಲು ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ. ತಲ್ಲೂರು, ಬಿಜೆಪಿ ಮುಖಂಡ ಎಚ್.ಈ. ಜ್ಞಾನೇಶ್, ಪಾಣಿ ರಾಜಪ್ಪ, ಗುರುಪ್ರಸನ್ನಗೌಡ, ಶಿವಕುಮಾರ್ ಕಡಸೂರು, ಹೊಳಿಯಮ್ಮ, ರಾಜು ಮಾವಿನಬಳ್ಳಿಕೊಪ್ಪ, ಲೋಕೇಶ್ ಜೋಳದಗುಡ್ಡೆ, ಕವಿತಾ, ದೇವರಾಜ, ಕೃಷ್ಣಮೂರ್ತಿ, ಈಶ್ವರಪ್ಪ ಚನ್ನಪಟ್ಟಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.