ADVERTISEMENT

ರೈತರ ಭೂ ಹಕ್ಕು ಸಮಸ್ಯೆ ಬಗೆಹರಿಸಿ: ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:06 IST
Last Updated 8 ಜನವರಿ 2024, 14:06 IST
<div class="paragraphs"><p>ಕಿಮ್ಮನೆ ರತ್ನಾಕರ</p></div>

ಕಿಮ್ಮನೆ ರತ್ನಾಕರ

   

ತೀರ್ಥಹಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರದಲ್ಲಿ ಈಜಾಡುವುದನ್ನು ಬಿಟ್ಟು ರೈತರ ಭೂ ಹಕ್ಕು ಸಮಸ್ಯೆ ಬಗೆಹರಿಸಲಿ. ಅರಣ್ಯ ಹಕ್ಕು ಕಾಯ್ದೆ ನಿಯಮ ಬದಲಾಯಿಸುವ ಭರವಸೆ ನೀಡಿದ್ದ ಯಡಿಯೂರಪ್ಪ, ಬಿ.ವೈ. ರಾಘವೇಂದ್ರ, ಆರಗ ಜ್ಞಾನೇಂದ್ರ ಈಗೆಲ್ಲಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.

‘ಭೂ ಹಕ್ಕು ಸ್ವಾಧೀನಾನುಭವದ ಆಧಾರದ ಮೇಲೆ ಅರಣ್ಯ ಹಕ್ಕು ಕಾಯ್ದೆಯಡಿ 75ರಿಂದ 25 ವರ್ಷಕ್ಕೆ ಇಳಿಸುವ ಭರವಸೆ ಹುಸಿಯಾಗಿದೆ. ಕೇಂದ್ರದಲ್ಲಿ 10 ವರ್ಷದಿಂದ ಬಿಜೆಪಿ ಸರ್ಕಾರ ಇದ್ದರೂ ಪರಿಹಾರ ನೀಡುವಲ್ಲಿ ವಿಫಲವಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ADVERTISEMENT

‘ಜನವರಿ 12ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯುವನಿಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಒಂದೂವರೆ ಲಕ್ಷ ಜನರು ಭಾಗವಹಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ದೋಷ ನಿವಾರಣೆಗೆ ವಿಶೇಷ ಅಹವಾಲು ಸಭೆ ನಡೆಸುತ್ತೇವೆ’ ಎಂದರು.

‘3 ತಿಂಗಳಿಗೊಮ್ಮೆ ರೈತರಿಗೆ ₹ 2,000 ನೀಡುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. 1 ಕೋಟಿ ರೈತರ ಬದಲಾಗಿ ಕೇವಲ 20 ಲಕ್ಷ ರೈತರಿಗೆ ಮಾತ್ರ ಯೋಜನೆ ಲಾಭ ನೀಡುತ್ತಿದೆ. ಮಾಧ್ಯಮಗಳು ವಾಸ್ತವ ಚರ್ಚೆಗೆ ವೇದಿಕೆಯಾಗಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಹೇಳಿದರು.

‘ಬಗರ್‌ಹುಕುಂ ಸಾಗುವಳಿ ರೈತರಿಗೆ ಭೂಹಕ್ಕು ಸಿಗದಿರಲು 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹೊರಡಿಸಿದ ಸುತ್ತೋಲೆ ಕಾರಣ. ರೈತರಿಗೆ ಭೂ ಮಂಜೂರು ಮಾಡಲು ಬಿಜೆಪಿ ನಾಯಕರೇ ಅಡ್ಡಗಾಲು ಹಾಕುತ್ತಿದ್ದಾರೆ. ಶರಾವತಿ ಸಂತ್ರಸ್ತರ ಭೂ ಹಕ್ಕು ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ’ ಎಂದು ಬಿ.ಎ. ರಮೇಶ್‌ ಹೆಗ್ಡೆ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌, ಉಪಾಧ್ಯಕ್ಷ ರೆಹಮತ್‌ ಉಲ್ಲಾ ಅಸಾದಿ, ಮುಖಂಡರಾದ ಎಸ್.ಪಿ. ದಿನೇಶ್, ಡಿ.ಎಸ್.‌ ವಿಶ್ವನಾಥ ಶೆಟ್ಟಿ, ಅಮ್ರಪಾಲಿ ಸುರೇಶ್‌, ಅಮರನಾಥ ಶೆಟ್ಟಿ, ಅದರ್ಶ ಹುಂಚದಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.