ADVERTISEMENT

ಸೊರಬ ಎಪಿಎಂಸಿ: ದಯಾನಂದಗೌಡ ಅಧ್ಯಕ್ಷ

3ನೇ ಅವಧಿಗೆ ನಡೆದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:14 IST
Last Updated 13 ಆಗಸ್ಟ್ 2021, 4:14 IST
ಸೊರಬದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಯಾನಂದಗೌಡ ಅವರನ್ನು ಶಾಸಕ ಎಸ್. ಕುಮಾರ್ ಬಂಗಾರಪ್ಪ ಅಭಿನಂದಿಸಿದರು.
ಸೊರಬದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಯಾನಂದಗೌಡ ಅವರನ್ನು ಶಾಸಕ ಎಸ್. ಕುಮಾರ್ ಬಂಗಾರಪ್ಪ ಅಭಿನಂದಿಸಿದರು.   

ಸೊರಬ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಎಪಿಎಂಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಯಾನಂದಗೌಡ ಅಧ್ಯಕ್ಷರಾಗಿ ಆಯ್ಕೆಯಾದರು.

ಜೈಶೀಲಪ್ಪ ಅವರ ರಾಜೀನಾಮೆಯಿಂದ ತೆರವಾದ 3ನೇ ಅವಧಿಗೆ ನಡೆದ ಅಧ್ಯಕ್ಷ ಸ್ಥಾನಕ್ಕೆ 15 ಸದಸ್ಯರ ಬಲವುಳ್ಳ ಎಪಿಎಂಸಿಯಲ್ಲಿ 11 ಸದಸ್ಯರು ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಮೂವರು ನಾಮ ನಿರ್ದೇಶನ ಸದಸ್ಯರು, ಒಬ್ಬರು ವರ್ತಕರ ಸಂಘದಿಂದ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಚ್.ಕೆ.ಜಯಶೀಲಗೌಡ ಅಂಕರವಳ್ಳಿ 7 ಮತಗಳು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ದಯಾನಂದಗೌಡ 8 ಮತಗಳನ್ನು ಪಡೆದು ಜಯಶಾಲಿಯಾದರು.

ಚುನಾವಣಾಧಿಕಾರಿ ಯಾಗಿ ತಹಶೀಲ್ದಾರ್ ಶಿವಾನಂದ ಪಿ. ರಾಣೆ ಕರ್ತವ್ಯ ನಿರ್ವಹಿಸಿದರು.

ADVERTISEMENT

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಸ್.ಕುಮಾರ್ ಬಂಗಾರಪ್ಪ, ‘ಎಪಿಎಂಸಿ ಕಾಯ್ದೆ ತಿದ್ದುಪಡಿ ಬಳಿಕ ಹಾಗೂ ಕೊರೊನಾ ಲಾಕ್‌ಡೌನ್‌ನಿಂದಾಗಿ ಅನುದಾನಗಳಿಲ್ಲದೇ ಸಮಿತಿಯು ಸಂಕಷ್ಟದಲ್ಲಿದೆ. ಈ ನಡುವೆ ಸುಮಾರು 16 ಜನ ಇಲ್ಲಿನ ಎಪಿಎಂಸಿಯಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸ್ಥಳೀಯವಾಗಿ ಎಪಿಎಂಸಿಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದ್ದು, ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ನೌಕರರು ಹಾಗೂ ಎಪಿಎಂಸಿ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಅಜ್ಜಪ್ಪ ಕಾಸರಗುಪ್ಪೆ ಮಾತನಾಡಿ, ‘ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಾಸಕರು ಇರುವುದರಿಂದ ಎಪಿಎಂಸಿ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ತಾವು ಈ ಹಿಂದೆ ಅಧ್ಯಕ್ಷರಾಗಲು ಸಹಕಾರ ನೀಡಿದ ದಯಾನಂದಗೌಡ ಅವರನ್ನು ಬೆಂಬಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಾಸಕರ ಅನುದಾನಗಳು ಹಾಗೂ ಸರ್ಕಾರದಿಂದ ಅನುದಾನಗಳನ್ನು ಪಡೆದು ಎಪಿಎಂಸಿ ಬಲಿಷ್ಠವಾಗುವ ನಂಬಿಕೆ ಇದೆ’ ಎಂದರು.

ಅಧ್ಯಕ್ಷ ದಯಾನಂದಗೌಡ ಮಾತನಾಡಿ, ‘ಸ್ಥಳೀಯ ಶಾಸಕರು ಮತ್ತು ಸದಸ್ಯರ ಸಹಕಾರದೊಂದಿಗೆ ಎಪಿಎಂಸಿಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುವುದು. ರೈತರಿಗೆ ಸಿಗಬಹುದಾದ ಸೌಲಭ್ಯಗಳನ್ನು ತಲುಪಿಸಲು ಯತ್ನಿಸುತ್ತೇನೆ. ಸಿಕ್ಕ ಅಧಿಕಾರಾವಧಿ ಕಡಿಮೆ ಇರಬಹುದು. ಅವಕಾಶವನ್ನು ರೈತರ ಅಭಿವೃದ್ಧಿಗೆ ಬಳಸುತ್ತೇನೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗುರುಪ್ರಸನ್ನಗೌಡ ಬಾಸೂರು, ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ಮುಖಂಡರಾದ ಭೋಗೇಶ್ ಶಿಗ್ಗಾ, ಶಿವಕುಮಾರ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಎಪಿಎಂಸಿ ಕಾರ್ಯದರ್ಶಿ ಆಶಾ, ಪ್ರೀತಂ, ವೆಂಕಟೇಶ್, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.