ADVERTISEMENT

ಚಂದ್ರಗುತ್ತಿ; ರೇಣುಕಾಂಬ ದೇವಿ ಲಕ್ಷ‌ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:53 IST
Last Updated 23 ನವೆಂಬರ್ 2025, 5:53 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಿತು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಿತು   

ಸೊರಬ: ತಾಲ್ಲೂಕಿನ‌ ಚಂದ್ರಗುತ್ತಿ ಮಲೆನಾಡಿನ ಪುರಾಣ ಪ್ರಸಿದ್ಧ ರೇಣುಕಾಂಬ ದೇವಸ್ಥಾನದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ವಿಜೃಂಭಣೆಯಿಂದ ನಡೆಯಿತು.

ಲಕ್ಷ ದೀಪೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿಶೇಷವಾಗಿ ಬಣ್ಣ ಬಣ್ಣದ ದೀಪಾಲಂಕಾರ, ಪುಷ್ಪಾಲಂಕಾರ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಭಕ್ತರು ದೇವಸ್ಥಾನದ ಮೆಟ್ಟಿಲುಗಳು ಮತ್ತು ಆವರಣದಲ್ಲಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.

ಲಕ್ಷ ದೀಪೋತ್ಸವದ ನಿಮಿತ್ತ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿದವು. ನಂತರ ರೇಣುಕಾಂಬೆಗೆ ಲಕ್ಷ ದೀಪೋತ್ಸವದ ಮಹಾ ಮಂಗಳಾರತಿ ನೆರವೇರಿತು. ಭಕ್ತರು ದೇವಿಯ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ವಾದ್ಯ ಮೇಳಗಳು ಲಕ್ಷ ದೀಪೋತ್ಸವಕ್ಕೆ ಮೆರುಗು ನೀಡಿದವು. ದೇವಸ್ಥಾನದ ಆವರಣದಲ್ಲಿ ಆಕಾಶದ ಎತ್ತರದಲ್ಲಿ ಜಗಮಗಿಸುವ ನಕ್ಷತ್ರಗಳ ಮಧ್ಯೆ ಆಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು.

ADVERTISEMENT

ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಜನಪದ ಕಲಾವಿದರಾದ ಶಿವರುದ್ರಪ್ಪ ಎನ್. ಜೋಗಿ ಮತ್ತು ಅವರ ಸಂಗಡಿಗರು ಗೆಂಡ್ಲಾ, ಹೊಸೂರು, ಚಿನ್ನರಜೋಗಿ ಜನಪದ ತಂಡದವರಿಂದ ಜೋಗಿ ಪದ ಕಾರ್ಯಕ್ರಮ ಪ್ರದರ್ಶನಗೊಂಡಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ ಮತ್ತು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ಅವರು ಜನಪದ ಕಲಾವಿದರನ್ನು ಗೌರವಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಲಕ್ಷ ದೀಪೋತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು.

ತಾಲ್ಲೂಕು ಸೇರಿ ಸುತ್ತಲಿನ ಗ್ರಾಮಗಳಿಂದ ಭಕ್ತರು ಬಂದು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಂಡರು.

ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.