ADVERTISEMENT

ಸೊರಬ | ಗೊಂದಲದ ಗೂಡಾದ ಪುರಸಭೆ ಸಾಮನ್ಯ‌ ಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 7:10 IST
Last Updated 17 ಸೆಪ್ಟೆಂಬರ್ 2025, 7:10 IST
ಸೊರಬ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು
ಸೊರಬ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು   

ಸೊರಬ: ಪುರಸಭೆ ವ್ಯಾಪ್ತಿಯ ಮುಖ್ಯ ಕಡತಗಳನ್ನು ಯಾರ ಅನುಮತಿ ಪಡೆಯದೆ ಸಾರ್ವಜನಿಕರ ವೀಕ್ಷಣೆಗೆ ಪುರಸಭೆ ಸಿಬ್ಬಂದಿ ನೀಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭೆ ನಾಮ ನಿರ್ದೇಶಿತ ಸದಸ್ಯ ಶಿವಪ್ಪ‌ ನಡಹಳ್ಳಿ ಆಗ್ರಹಿಸಿದರು.‌

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು‌ ಮಾತನಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಅನೇಕ‌ ಕಾಮಗಾರಿ, ಖರ್ಚು–ವೆಚ್ಚಗಳ ಹಾಗೂ ಇತರೆ ಮಾಹಿತಿ ಒಳಪಡುವ ದಾಖಲೆಗಳ ಪರಿಶೀಲನೆ ಅಧಿಕಾರಿಗಳ ಹಾಗೂ ಅಧ್ಯಕ್ಷರ ಕರ್ತವ್ಯ. ಆದರೆ ಪುರಸಭೆ ಕೆಲವು ಸಿಬ್ಬಂದಿ ಕಡತಗಳನ್ನು ಸಾರ್ವಜನಿಕರಿಗೆ ನೀಡುವುದು ಬೆಳಕಿಗೆ ಬಂದಿದೆ. ಪುರಸಭೆ ಸಿ.ಸಿ.ಟಿ.ವಿ ಕ್ಯಾಮೆರ ಪರಿಶೀಲಿಸಿ ಅಂತಹ ಸಿಬ್ಬಂದಿ ಮೇಲೆ ಕಠಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪುರಸಭೆ ವ್ಯಾಪ್ತಿಯು ಹೆಚ್ಚಳವಾಗಿದ್ದು, ಕೇವಲ 15 ಪೌರ ಕಾರ್ಮಿಕರಿಂದ ಸ್ವಚ್ಚತೆ ಅಸಾಧ್ಯ. ಅದರಲ್ಲಿ 3 ಮಂದಿ ಪೌರ ಕಾರ್ಮಿಕರನ್ನು ಕಚೇರಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಸುತ್ತಲಿನ ಗ್ರಾಮಗಳು ಸಹ ಸೇರ್ಪಡೆಯಾಗಿವೆ. ಕುಡಿಯುವ ನೀರು ಪೂರೈಕೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಪುರಸಭೆ ನಾಮ ನಿರ್ದೇಶಿತ ಸದಸ್ಯ ಪರಶುರಾಮ ಸಣ್ಣಬೈಲ್ ಒತ್ತಾಯಿಸಿದರು.

ಅರ್ಧಕ್ಕೆ ಮೊಟಕುಗೊಂಡ ಸಭೆ:
ಪುರಸಭೆ ವ್ಯಾಪ್ತಿಯ ಸ.ನಂ 341ರ ಸರ್ಕಾರಿ ಸ್ವತ್ತನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹೀರವಾಗಿ ಪುರಸಭೆಯ ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಪುರಸಭೆ ವ್ಯಾಪ್ತಿಯ ಕಸಿಮಾವಿನ ಕೊಪ್ಪಲು ಬಡಾವಣೆಯಲ್ಲಿರುವ ಖಾನೇಸುಮಾರಿ ಖಾಲಿ ನಿವೇಶನದ ಕುರಿತು ನ್ಯಾಯಾಲಯ ಸ್ವಷ್ಟವಾಗಿ ಇದು ಸರ್ಕಾರಿ ಸ್ವತ್ತಾಗಿದ್ದು, ಇಲ್ಲಿನ ಸಾರ್ವಜನಿಕ ಬಳಕೆಗೆ ಹಾಗೂ ಪುರಸಭೆಗೆ ಸೇರಿದ ಪ್ರದೇಶವೆಂದು ಆದೇಶ ಮಾಡಿದ್ದರೂ ಸಹ, ಅಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೆರೆಚಿದ್ದಾರೆ ಎಂದು ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ ಗಂಭೀರವಾಗಿ ಆರೋಪಿಸಿದರು. ಈ‌‌ ಬಗ್ಗೆ‌ ಪ್ರತಿಕ್ರಿಯಿಸಲು ಸಿದ್ಧರಾದ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಮಾತನಾಡಲು ಅವಕಾಶ ನೀಡದ ಕಾರಣ ಸಭೆ ಗೊಂದಲದ ಗೂಡಾಗಿ ಸಭೆ ಅರ್ದಕ್ಕೆ ಮೊಟಕುಗೊಳಿಸಲಾಯಿತು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಶ್ರೀರಂಜನಿ, ಸದಸ್ಯರಾದ ಎಂ.ಡಿ. ಉಮೇಶ್, ಮಧುರಾಯ್ ಜಿ. ಶೇಟ್, ಯು. ನಟರಾಜ್, ಅನ್ಸರ್ ಆಹ್ಮದ್, ಸುಲ್ತಾನ ಬೇಗಂ, ಜಯಲಕ್ಷ್ಮಿ, ಪ್ರೇಮಾ ಟೋಕಪ್ಪ, ಆಫ್ರೀನ್ ಮೆಹಬೂಬ ಭಾಷಾ, ನಾಮನಿರ್ದೇಶಿತ ಸದಸ್ಯರಾದ ಶಿವಪ್ಪ ನಡಹಳ್ಳಿ, ದಾನಪ್ಪ ಇದ್ದರು.

ಕಾನೂನುಬಾಹೀರವಾಗಿ ಇಸ್ವತ್ತನ್ನು ಮಾಡಿಲ್ಲ. ಯಾವುದೇ ರೀತಿಯ ಅವ್ಯವಹಾರ ಮತ್ತು ಸರ್ಕಾರಿ ಆಸ್ತಿಯು ಖಾಸಗಿಯವರ ಪಾಲಾಗಲು ಅವಕಾಶ ನೀಡುವುದಿಲ್ಲ.
ಎಚ್.ವಿ ಚಂದನ್, ಮುಖ್ಯಾಧಿಕಾರಿ ಪುರಸಭೆ ಸೊರಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.