ADVERTISEMENT

22ರಿಂದ ಕುಪ್ಪಳಿಯಲ್ಲಿ ರಾಜ್ಯಮಟ್ಟದ ಕಮ್ಮಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 8:10 IST
Last Updated 21 ಅಕ್ಟೋಬರ್ 2021, 8:10 IST

ತೀರ್ಥಹಳ್ಳಿ: ಬಂಡಾಯ, ನವೋತ್ತರ ಸಾಹಿತ್ಯದ ಅರಿಕೆಯ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ವಿಮರ್ಶೆಯ ದೃಷ್ಟಿಕೋನ ಮುಖ್ಯ. ಸಾಹಿತಿ, ಓದುಗನ ನಡುವಿನ ಅಂತರವನ್ನು ಭರ್ತಿ ಮಾಡಲು ಪುನರಾವಲೋಕನದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕುಪ್ಪಳಿಯಲ್ಲಿ ಅ.22ರಿಂದ 26ರವರೆಗೆ ರಾಜ್ಯ ಮಟ್ಟದ ವಿಮರ್ಶಾ ಕಮ್ಮಟ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷಡಾ.ಬಿ.ವಿ. ವಸಂತಕುಮಾರ್ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿಕಮ್ಮಟ ನಡೆಯಲಿದೆ.

ಅಕಾಡೆಮಿಯ ಮೊಟ್ಟ ಮೊದಲ ಕಮ್ಮಟ 1974ರಲ್ಲಿ ವಿ.ಕೃ. ಗೋಕಾಕ್ ನಿರ್ದೇಶನದಲ್ಲಿ ನಡೆದಿತ್ತು. ನಂತರ ಹಾ.ಮಾ. ನಾಯಕ್ ಅವರು ವಿನೂತನ ಆಯಾಮ ನೀಡಿದ್ದರು. ಎರಡು ಜ್ಞಾನಪೀಠ ಸೇರಿ ಸಾಹಿತ್ಯ ಕ್ಷೇತ್ರದಲ್ಲಿ ತಾಲ್ಲೂಕಿನ ಸಾಧನೆ ಗಣನೀಯ. ಈ ಉದ್ದೇಶದಲ್ಲಿ ಕುಪ್ಪಳಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.

ADVERTISEMENT

ರಾಜ್ಯದ ನಾನಾ ಭಾಗಗಳಿಂದ 60 ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಉದ್ಘಾಟಿಸಲಿದ್ದಾರೆ. ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಸಮಾರೋಪ ನುಡಿ ಆಡಲಿದ್ದಾರೆ. ಶಿಬಿರದ ನಿರ್ದೇಶಕರಾಗಿ ಪ್ರೊ. ಬಸವರಾಜ ಕಲ್ಗುಡಿ, ಸಹ ನಿರ್ದೇಶಕರಾಗಿ ಡಾ. ಎಂ. ಉಷಾ, ಡಾ. ವಿಕ್ರಮ ವಿಸಾಜಿ, ಡಾ.ಜಿ.ಬಿ. ಹರೀಶ್, ರಾಘವೇಂದ್ರ ತೊಗರ್ಸಿ ಕಾರ್ಯನಿರ್ವಹಿಸಲಿದ್ದಾರೆ.ಶಿಬಿರದಲ್ಲಿ ಕಾವ್ಯ ಮೀಮಾಂಸೆ, ಸಾಹಿತ್ಯ, ಕೃತಿ, ಜನಪ್ರಿಯ ಸಾಹಿತ್ಯ, ಸಂಸ್ಕೃತಿ, ಕಲಾ ವಿಮರ್ಶೆಗಳ ವೈವಿಧ್ಯ, ತತ್ವಚಿಂತನೆ, ತಾತ್ವಿಕತೆ, ಮಾನದಂಡ, ಸ್ವರೂಪ, ರೂಪನಿಷ್ಠತೆ, ಅಸಂಗತತೆ, ಪರಿಸರ ಪ್ರಜ್ಞೆ ಮುಂತಾದ ಶಿಸ್ತುಗಳ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವೈಚಾರಿಕ, ದೇಸಿ ಚಿಂತನೆ ಸೇರಿ ಸಾಹಿತ್ಯದ ಅಂತರ ಶಿಸ್ತೀಯ ಚಿಂತನೆಗಳಾದ ಮಾರ್ಕ್ಸ್‌ವಾದ, ಸಮಾಜವಾದ, ಮನೋವೈಜ್ಞಾನಿಕ, ಸಿನಿಮಾ, ನಾಟಕ, ಚಿತ್ರಕಲೆ, ಸಂಗೀತ ಕ್ಷೇತ್ರದಲ್ಲಿ ಪರಿಣತಿ ಪಡೆದವರಿಂದ ಉಪನ್ಯಾಸ, ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಅಕಾಡೆಮಿ ಸದಸ್ಯ ಡಾ.ಮಾರ್ಷಲ್ ಶರಾಂ, ಪಾರ್ವತಿ ಪಿಟಗಿ, ರಿಜಿಸ್ಟ್ರಾರ್ ಕರಿಯಪ್ಪ
ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.