ADVERTISEMENT

ಸಾಗರ: ಬೀದಿ ನಾಯಿಗಳ ಹಾವಳಿ; ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:38 IST
Last Updated 3 ಸೆಪ್ಟೆಂಬರ್ 2025, 4:38 IST
ಸಾಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಮಂಗಳವಾರ ವಿವಿಧ ಸಂಘಟನೆಗಳ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಮಂಗಳವಾರ ವಿವಿಧ ಸಂಘಟನೆಗಳ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಸಾಗರ: ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಮಂಗಳವಾರ ವಿವಿಧ ಸಂಘಟನೆಗಳ ಪ್ರಮುಖರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ನಗರದ ಬಹುತೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಕಳೆದ ಸೋಮವಾರ ಜನ್ನತ್ ನಗರ ಬಡಾವಣೆಯಲ್ಲಿ ಮಕ್ಬುಲ್ ಎಂಬ ಮೂರು ವರ್ಷದ ಮಗುವಿಗೆ ಬೀದಿ ನಾಯಿ ಕಡಿದು ಗಂಭೀರ ಗಾಯಗಳಾಗಿವೆ. ಬೀದಿ ನಾಯಿಗಳ ಹಾವಳಿ ತಡೆಯುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ನಗರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರಾಣಿ ದಯಾ ಸಂಘದವರು ಅಡ್ಡಿಪಡಿಸುತ್ತಿದ್ದಾರೆ ಎಂದು ನಗರಸಭೆ ಸಿಬ್ಬಂದಿ ಸಬೂಬು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ಕಾನೂನಿನ ನಿಯಮಗಳ ಪ್ರಕಾರ ಯಾವ ರೀತಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬುದನ್ನು ನಗರಸಭೆ ಅಧಿಕಾರಿಗಳು ಮರೆತಂತಿದೆ ಎಂದು  ಟೀಕಿಸಿದರು.

ADVERTISEMENT

ಈಚೆಗೆ ನಡೆದ ಪ್ರತಿಭಟನೆಯೊಂದಕ್ಕೆ ನಗರಸಭೆ ಆಡಳಿತ ರೂ. 30 ಸಾವಿರ ಅನುದಾನ ಮಂಜೂರು ಮಾಡಿದೆ. ನಗರಸಭೆ ಇತಿಹಾಸದಲ್ಲಿ ಇಂತಹ ವಿದ್ಯಮಾನ ಯಾವತ್ತೂ ನಡೆದಿಲ್ಲ. ಪ್ರತಿಭಟನೆಗೆ ನೀಡಲು ಹಣ ವಿನಿಯೋಗಿಸುವ ನಗರಸಭೆ ಆಡಳಿತ ಬೀದಿ ನಾಯಿ ಕಚ್ಚಿದವರಿಗೆ ಪರಿಹಾರ ನೀಡಲು ಹಿಂಜರಿಯುವುದು ಯಾಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಬೀದಿ ನಾಯಿಗಳ ಹಾವಳಿ ತಡೆಯುವಂತೆ ನಾಗರಿಕರು ನಗರಸಭೆ ಎದುರು ಪ್ರತಿಭಟನೆ ಮಾಡಬೇಕಾದ ಸನ್ನಿವೇಶ ಬಂದಿರುವುದು ಆಡಳಿತ ಕಾರ್ಯವೈಖರಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಈಗಲಾದರೂ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿ ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ತೀ.ನ. ಶ್ರೀನಿವಾಸ್, ದಿನೇಶ್ ಶಿರವಾಳ, ಮಂಜಪ್ಪ ಹಿರೇನೆಲ್ಲೂರು, ಜಮೀಲ್ ಸಾಗರ್, ರಫೀಕ್ ಕೊಪ್ಪ, ಸದ್ದಾಂ ದೊಡ್ಮನೆ, ವಸೀಂ ಉಳ್ಳೂರು, ಕಬೀರ್ ಚಿಪ್ಪಳಿ, ಇಮ್ರಾನ್, ಮನ್ಸೂರ್, ಇಸ್ಮಾಯಿಲ್, ಪ್ರವೀಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.