ADVERTISEMENT

ಮಕ್ಕಳಸ್ನೇಹಿ ಶೈಕ್ಷಣಿಕ ವಾತಾವರಣ ನಿರ್ಮಿಸೋಣ: ಜಿಲ್ಲಾಧಿಕಾರಿ

ಮೈಸೂರು ಎಜುಕೇಷನ್ ಅಕಾಡೆಮಿ: ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:08 IST
Last Updated 14 ಡಿಸೆಂಬರ್ 2025, 7:08 IST
ಶಿವಮೊಗ್ಗದಲ್ಲಿ ಶನಿವಾರ ಮೈಸೂರು ಎಜುಕೇಶನ್ ಅಕಾಡೆಮಿಯಿಂದ ನಡೆದ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು
ಶಿವಮೊಗ್ಗದಲ್ಲಿ ಶನಿವಾರ ಮೈಸೂರು ಎಜುಕೇಶನ್ ಅಕಾಡೆಮಿಯಿಂದ ನಡೆದ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು   

ಶಿವಮೊಗ್ಗ : ಶಿವಮೊಗ್ಗದಲ್ಲಿ ಶೈಕ್ಷಣಿಕ ವಾತಾವರಣ ಉತ್ತಮಗೊಳ್ಳುತ್ತಿದೆ. ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಸ್ಪಂದನೆ ನೀಡುತ್ತಿದ್ದಾರೆ. ಎಲ್ಲರೂ ಸೇರಿ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸೋಣ. ಈ ನಿಟ್ಟಿನಲ್ಲಿ ಮೈಸೂರು ಎಜುಕೇಷನ್ ಅಕಾಡೆಮಿ ಕೈಜೋಡಿಸುತ್ತಿದೆ. ಅದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಮೈಸೂರು ಎಜುಕೇಷನ್ ಅಕಾಡೆಮಿಯಿಂದ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಆಯೋಜಿಸಿದ್ದ ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಉಲ್ಲಾಸ, ಶಿಸ್ತು, ಸಂವಹನ ಇರಬೇಕು ಎಂದು ಕಿವಿಮಾತು ಹೇಳಿದರು.

ಇಂತಹ ಕಾರ್ಯಾಗಾರಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಪರೀಕ್ಷೆಯ ಭಯ ಇಲ್ಲವಾಗಿಸುತ್ತವೆ. ಮಕ್ಕಳು ಪರೀಕ್ಷಾ ಸಮಯದಲ್ಲಿ ಅತ್ಯಂತ ತಾಳ್ಮೆಯಿಂದ ಓದಬೇಕು. ದಿನಕ್ಕೆ ಏಳು ಗಂಟೆ ಮಲಗಬೇಕು. ಪರೀಕ್ಷೆಗಾಗಿ ಓದುವ ಹೊರತಾಗಿ ಬೇರೆ ಪುಸ್ತಕಗಳನ್ನು ಸ್ವಲ್ಪವಾದರೂ ಓದಬೇಕು.  ಓದಿದ್ದನ್ನು ಬೇರೆಯವರ ಜೊತೆ ಹಂಚಿಕೊಳ್ಳಿ ಆಗ ನಿಮಗೆ ಪಠ್ಯ ಸುಲಭವಾಗಿ ಅರ್ಥವಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಮುಖ್ಯ ಅತಿಥಿ ಆಗಿದ್ದ ಜಿ.ಪಂ. ಸಿಇಒ ಎನ್.ಹೇಮಂತ್, ‘ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳಿವೆ. ಈ ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಉತ್ತರ ಬರೆಯಿರಿ. ಮುಂದೆ ಬರುವ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸಿ ಆಗ ಏಳು ಪ್ರಶ್ನೆ ಪತ್ರಿಕೆಗಳು ನಿಮ್ಮ ಕೈಯಲ್ಲಿರುತ್ತವೆ. ಈ ಪ್ರಶ್ನೆಗಳು ಬಿಟ್ಟು ಬೇರೆಯವು ಬರಲು ಸಾಧ್ಯವೇ ಇಲ್ಲ. ಪರೀಕ್ಷೆ ಸಮಯದಲ್ಲಿ ಕಡಿಮೆ ಓದಿ ಪುನರಾವರ್ತನೆ ಹೆಚ್ಚು ಮಾಡಿ’ ಎಂದು ಸಲಹೆ ನೀಡಿದರು.

ಮೈಸೂರು ಎಜುಕೇಷನ್ ಟ್ರಸ್ಟಿನ ಮುಖ್ಯಸ್ಥರೂ ಆದ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ‘ಶಿವಮೊಗ್ಗದಲ್ಲಿ ಒಂದು ಶೈಕ್ಷಣಿಕ ವಾತಾವರಣ ಸೇವೆಯ ಮೂಲಕ ನಿರ್ಮಿಸಬೇಕು ಎಂಬುದು ನಮ್ಮ ಟ್ರಸ್ಟ್‌ನ ಕನಸು. ಹೀಗಾಗಿಯೇ ಗಂಗೋತ್ರಿ ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ. ಉತ್ತಮ ವಾತಾವರಣವಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಶುಲ್ಕ ಕೂಡ ನಿಗದಿಪಡಿಸಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಎಸ್.ಆರ್. ಮಂಜುನಾಥ್, ಬಿಇಒ ರಮೇಶ್ ನಾಯಕ್, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ, ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಗಂಗೋತ್ರಿ ಸ್ವತಂತ್ರ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ರೂಪಾ ಪುಣ್ಯಕೋಟಿ, ಪ್ರಾಂಶುಪಾಲ ರೇಣುಕಾರಾಧ್ಯ, ಟ್ರಸ್ಟಿನ ಅಧ್ಯಕ್ಷ ಎನ್.ಬಿ. ಮಂಜುನಾಥ್, ಉಪಾಧ್ಯಕ್ಷ ಬಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಜಗದೀಶ್, ಜಂಟಿ ಕಾರ್ಯದರ್ಶಿ ಡಾ.ಎಚ್.ಪಿ. ಇರ್ಫಾನ್ ಅಹಮದ್, ನಿರ್ದೇಶಕರಾದ ಎಂ.ಪಿ. ದಿನೇಶ್‌ ಪಟೇಲ್, ಚಂದನ್, ರಾಕೇಶ್‌ಗೌಡ, ಪಿ.ಎಸ್. ಗಿರೀಶ್‌ರಾವ್ ಮಾನೆ ಇದ್ದರು. ಸಂಪನ್ಮೂಲ ವ್ಯಕ್ತಿಗಳಾದ ಆರ್.ಎ. ಚೇತನ್‌ರಾಮ್, ಸುರೇಶ್ ಕುಲಕರ್ಣಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಇದರ ಪ್ರಯೋಜನ ಶಿಕ್ಷಕರು ಮಕ್ಕಳು ಮತ್ತು ಪೋಷಕರು ಪಡೆಯಬೇಕು.
– ಎಚ್.ಎಸ್.ಸುಂದರೇಶ, ಸೂಡಾ ಅಧ್ಯಕ್ಷ
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ಗಳನ್ನು ಬಿಟ್ಟುಬಿಡಿ. ಬೇಗನೆ ಮಲಗಿ ಪ್ರತಿನಿತ್ಯ ವ್ಯಾಯಾಮ ಮಾಡಿ. ಒತ್ತಡ ಕಡಿಮೆ ಮಾಡಿಕೊಳ್ಳಿ ಆರೋಗ್ಯದ ಕಡೆ ಗಮನವಿರಲಿ.
– ಎನ್.ಹೇಮಂತ್, ಜಿಲ್ಲಾ ಪಂಚಾಯ್ತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.