ಸೊರಬ: ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ತಾವು ಬಯಸಿದಂತೆ ಬದುಕಲು ಸ್ಪರ್ಧಾತ್ಮಕವಾಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವುದು ಸಮಾಜದ ಸಂಘ ಸಂಸ್ಥೆಗಳ ಕರ್ತವ್ಯ. ಆ ಮೂಲಕ ಅವರ ಪ್ರತಿಭೆಗೆ ತಕ್ಕ ಬೆಲೆ ಹಾಗೂ ಪ್ರೇರಣೆ ನೀಡಿದಂತಾಗುತ್ತದೆ’ ಎಂದು ಹೇಳಿದರು.
‘ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಎಸ್ಎಸ್ಎಲ್‌ಸಿ ಅತಿ ಮುಖ್ಯಘಟ್ಟ. ಮಕ್ಕಳ ಸಾಧನೆಯಲ್ಲಿ ಪೋಷಕರ, ಶಿಕ್ಷಕರ ಪರಿಶ್ರಮ ಬಹಳಷ್ಟಿದೆ. ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಶಿಕ್ಷಕರು ಸತತ ಎರಡು ತಿಂಗಳು ರಾತ್ರಿ ತರಗತಿ ನಡೆಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಆರ್. ತಿಳಿಸಿದರು.
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ನಿಖಿತಾ ಕೆ, ಡಿ.ಸಿರಿಗೌರಿ ಹಾಗೂ ಕೋಟಿಪುರ ಎವರಾನ್ ಪ್ರೌಢಶಾಲೆಯ ಸುಮಯ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್, ಪುರಸಭೆ ಉಪಾಧ್ಯಕ್ಷೆ ಶ್ರೀರಂಜಿನಿ, ಶಿಕ್ಷಕ ಹಾಲೇಶ್ ನವುಲೆ ಮಾತನಾಡಿದರು.
ರಾಜು ಹಿರಿಯಾವಲಿ, ಸ್ನೇಹ ಸುರಭಿ ಸರಸ್ವತಿ, ಶಿಕ್ಷಕ ಹಾಲೇಶ್ ನವುಲೆ, ಜಾನಕಪ್ಪ, ಲಕ್ಷ್ಮಣ, ಮೇಘನಾ, ಶಿವಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.