ADVERTISEMENT

ಕಾಯಕದಲ್ಲಿ ತತ್ವನಿಷ್ಠೆ ಮೆರೆದ ಶರಣರು: ರೇಣುಕಮ್ಮ ಗೌಳಿ

4ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೆ ರೇಣುಕಮ್ಮ ಗೌಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:04 IST
Last Updated 22 ಫೆಬ್ರುವರಿ 2021, 4:04 IST
ಸೊರಬದ ಮುರುಘಾ ಮಠದಲ್ಲಿ ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಭಾನುವಾರ ಹಮ್ಮಿಕೊಂಡಿದ್ದ 4ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು
ಸೊರಬದ ಮುರುಘಾ ಮಠದಲ್ಲಿ ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಭಾನುವಾರ ಹಮ್ಮಿಕೊಂಡಿದ್ದ 4ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು   

ಸೊರಬ: ಮನುಷ್ಯ ಕುಲದ ಬಗ್ಗೆ ತಾರತಮ್ಯ ಭಾವವಿದ್ದ ಕಾಲದಲ್ಲಿ ಹುಟ್ಟು ಯಾವ ಜಾತಿಯಿಂದ ಆಗಿದೆ ಎನ್ನುವುದು ಮುಖ್ಯವಲ್ಲ. ದಯವೇ ಧರ್ಮದ ಮೂಲವೆಂದು ಕಾಯಕದಲ್ಲಿ ತತ್ವನಿಷ್ಠೆ ಮೆರೆದ ಶಿವಶರಣರು ಮಾನವ ಪಂಥಕ್ಕೆ ದುಡಿದ ನಿಜವಾದ ಶ್ರಮಜೀವಿಗಳು ಎಂದು ತಾಲ್ಲೂಕು 4ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ರೇಣುಕಮ್ಮ ಗೌಳಿ ಹೇಳಿದರು.

ಪಟ್ಟಣದ ಮುರುಘಾ ಮಠದ ಸಭಾಂಗಣದಲ್ಲಿ ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 4ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆಯ ಭಾಷಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಅಂಧಕಾರ, ಭೇದ-ಭಾವ, ಧಾರ್ಮಿಕ ಪರಂಪರೆ ಹಾಗೂ ಜಾತೀಯತೆಯ ಅತ್ಯಂತ ಕಠೋರ ಸ್ವರೂಪವನ್ನು ಕಂಡು ಬೆಚ್ಚಿದ ಶರಣರು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ಕಾಯಕ ದಾಸೋಹದ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿ ಹೊಸದೊಂದು ನಡೆಗೆ ಹೆಜ್ಜೆಯಿರಿಸಿ ವೃತ್ತಿ ಗೌರವ ಪ್ರತಿಪಾದಿಸಿದರು ಎಂದರು.

ADVERTISEMENT

ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಸೇರಿ ವಚನಕಾರರ ಕೊಡುಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಮಹತ್ವದ ನೆಲೆ ನೀಡಿದೆ ಎಂದ ಅವರು, ಕರ್ನಾಟಕದಲ್ಲಿ ವಚನ ಸಾಹಿತ್ಯ ಪರಂಪರೆ ಹಾಗೂ ಅದರಿಂದಾದ ಬದಲಾವಣೆ ಬಗ್ಗೆ ವಿಶ್ಲೇಷಿಸಿದರು.

ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿ ಬಸವಣ್ಣನವರ ನೇತೃತ್ವದಲ್ಲಿ ವಚನಕಾರರ ದಿಟ್ಟ ಹೋರಾಟ ಮನುಜ ಕುಲಕ್ಕೆ, ಮಾನವೀಯತೆಗೆ ಹೊಸ ಆಯಾಮವನ್ನು ತಂದಿತು ಎಂದರು.

ಸರ್ಕಾರ ಪ್ರತಿಭಾ ಕಾರಂಜಿಯಲ್ಲಿ ವಚನ ಗಾಯನ ಸ್ಪರ್ಧೆ ಅಳವಡಿಸಬೇಕು. ಪ್ರಾಥಮಿಕ ಶಿಕ್ಷಣದಿಂದಲೇ ಪಠ್ಯದಲ್ಲಿ ವಚನಗಳ ಸೇರ್ಪಡೆ ಮಾಡಬೇಕು. ಮಕ್ಕಳಿಂದ ವಚನಗಳ ಬಗ್ಗೆ ಕಿರುನಾಟಕ ಪ್ರದರ್ಶನ ಮಾಡಿಸಬೇಕು ಎಂದು ಒತ್ತಾಯಿಸಿದರು.

ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಡಿ. ಉಮೇಶ್ ಉದ್ಘಾಟಿಸಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಕೃಷ್ಣಾನಂದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಇ. ಸುನಂದಾ ಸರ್ವಾಧ್ಯಕ್ಷರ ಪರಿಚಯ ಮಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್. ಮಹಾರುದ್ರ ಆಶಯ ನುಡಿಗಳನ್ನಾಡಿದರು.

ಭದ್ರಾವತಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿರೂಪಾಕ್ಷಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ. ಶಿವಕುಮಾರ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಜಗದೀಶ್, ರೇಖಮ್ಮ, ಗಾಯತ್ರಿ ಪಾಟೀಲ್, ಮಲ್ಲಿಕಾಂಬಾ, ಹೇಮಾವತಿ, ಪ.ಗು. ವಿರೂಪಾಕ್ಷಪ್ಪ, ಡಾ.ಜ್ಞಾನೇಶ್, ನಾಗರಾಜ್ ಗುತ್ತಿ, ಈರೇಶ್ ಗೌಡ ಇದ್ದರು.

ಅಕ್ಕನ ಬಳಗದವರು ಪ್ರಾರ್ಥಿಸಿದರು. ಸಂಗೀತ ಶಿಕ್ಷಕ ಪ್ರವೀಣ್ ಭಂಡಾರಿ ಹಾಗೂ ಶಿಷ್ಯ ವೃಂದ ವಚನ ಗಾಯನ ನಡೆಸಿಕೊಟ್ಟರು. ಉಪಾಧ್ಯಕ್ಷ ಮೃತ್ಯುಂಜಯ ಗೌಡ ಸ್ವಾಗತಿಸಿದರು. ಹಾಲೇಶ್ ನವುಲೆ ವಂದಿಸಿದರು. ಗಂಗಾಧರಸ್ವಾಮಿ ಹಿರೇಮಠ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.