
ರಿಪ್ಪನ್‌ಪೇಟೆ: ಇಲ್ಲಿನ ಗವಟೂರು ಗ್ರಾಮದ ಕೂಲಿ ಕಾರ್ಮಿಕರೊಬ್ಬರು ಮಂಗಳವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ದೊಡ್ಡಿನಕೊಪ್ಪದ ಮಂಜುನಾಥ್ (37) ಸಾವಿಗೀಡಾದವರು. ಮಧ್ಯಾಹ್ನ ಮನೆಗೆ ದೂರವಾಣಿ ಕರೆ ಮಾಡಿದ್ದ ಇವರು ಗವಟೂರಿನ ಜಗದೀಶ ಅವರ ತೋಟದಲ್ಲಿ ಅಡಿಕೆ ಗೊನೆ ಹೊರುವ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ಕೆಲಸ ಮುಗಿಸಿ ಬೇಗ ಬರುವುದಾಗಿಯೂ ತಿಳಿಸಿದ್ದರು.
ಆದರೆ, ಸಂಜೆ 4 ರ ಹೊತ್ತಿಗೆ ಜಗದೀಶ್ ಹಾಗೂ ಅವರ ಪುತ್ರ ಕಾರಿನಲ್ಲಿ ಮಂಜುನಾಥ್ ಅವರ ಮೃತದೇಹ ತಂದು, ಅಪರಿಚಿತ ವ್ಯಕ್ತಿ ಮಾರ್ಗ ಮಧ್ಯೆ ಬಿದ್ದಿದ್ದ ಎಂದು ಹೇಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಟುಂಬಸ್ಥರಿಗೂ ಮಾಹಿತಿ ನೀಡಿಲ್ಲ.
ಸಾವಿನ ವಿಷಯ ತಿಳಿದ ಕುಟುಂಬಸ್ಥರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ರಾಜು ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಅಂಗವಾಗಿ ಜಗದೀಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.