ADVERTISEMENT

ಶಿವಮೊಗ್ಗ| ಸೈಮ್ಯಾಗೊ ರ್‍ಯಾಂಕಿಂಗ್‌: ಕುವೆಂಪು ವಿ.ವಿಗೆ 39ನೇ ಸ್ಥಾನ

ಸಂಶೋಧನಾ ಮಾನದಂಡದಡಿ ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:08 IST
Last Updated 22 ಅಕ್ಟೋಬರ್ 2020, 4:08 IST
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಕಟ್ಟಡ
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಕಟ್ಟಡ   

ಶಿವಮೊಗ್ಗ: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ್‍ಯಾಂಕಿಂಗ್ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೊ ಪಟ್ಟಿ ಬಿಡುಗಡೆಯಾಗಿದ್ದು, ಸಂಶೋಧನಾ ಮಾನದಂಡದಡಿ ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ 39ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಜಗತ್ತಿನಾದ್ಯಂತ ವಿಜ್ಞಾನ ಸಂಶೋಧನಾ ಪ್ರಕಟಣೆಗಳ ಶ್ರೇಷ್ಠತೆಯನ್ನು ಅಳೆಯುವ ಸ್ಕೋಪಸ್ ಸಂಸ್ಥೆ ಸಹಭಾಗಿತ್ವದಲ್ಲಿ ಸೈಮ್ಯಾಗೊ ಸಮೀಕ್ಷೆ ಕೈಗೊಳ್ಳುತ್ತದೆ.

ಜಾಗತಿಕ ಮಟ್ಟದಲ್ಲಿ ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಇತರೆ ಕ್ಷೇತ್ರಗಳ ವಿಭಾಗಗಳಲ್ಲಿ 7026 ಸಂಸ್ಥೆಗಳನ್ನು ಒಳಗೊಂಡ 2020ನೇ ಸಾಲಿನ ಸಮಗ್ರ ರ್‍ಯಾಂಕಿಂಗ್ ಪಟ್ಟಿಯನ್ನು ಈಚೆಗೆ ಬಿಡುಗಡೆಗೊಳಿಸಿದೆ.

ADVERTISEMENT

2018ರಲ್ಲಿ 45ನೇ ಸ್ಥಾನ, 2019ರಲ್ಲಿ 43ನೇ ಸ್ಥಾನದಲ್ಲಿದ್ದ ಕುವೆಂಪು ವಿಶ್ವವಿದ್ಯಾಲಯ ಪ್ರಸ್ತುತ 39ನೇ ರ‍್ಯಾಂಕ್‍ಗೆ ಜಿಗಿದಿದೆ. ಸ್ಕೋಪಸ್ ಸೈಟೇಷನ್‍ನಲ್ಲಿಯೂ ವಿ.ವಿಯ ಸಂಶೋಧನ ಲೇಖನಗಳು ಹೆಚ್ಚುಹೆಚ್ಚಾಗಿ ಉಲ್ಲೇಖಿತಗೊಳ್ಳುತ್ತಿವೆ. ಕರ್ನಾಟಕದ ವಿ.ವಿಗಳಲ್ಲಿ ಅಗ್ರ ಮೂರು ಸ್ಥಾನದಲ್ಲಿದೆ. ಐದು ವಿಭಾಗಗಳನ್ನೊಳಗೊಂಡ ಸಮಗ್ರ (7026 ಸಂಸ್ಥೆಗಳ) ರ್‍ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ 774ನೇ ಸ್ಥಾನ ಗಳಿಸಿದೆ. ಏಷ್ಯಾ ವಲಯದಲ್ಲಿ 2093 ಸಂಸ್ಥೆಗಳ ಪಟ್ಟಿಯಲ್ಲಿ 289ನೇ ಸ್ಥಾನ ಗಳಿಸಿದ್ದು, ಭಾರತದಲ್ಲಿ ಟಾಪ್ 100 ಸಂಸ್ಥೆಗಳ ಪಟ್ಟಿಯೊಳಗೆ ಸ್ಥಾನ ಪಡೆದಿದೆ.

ಕರ್ನಾಟಕದ ಸಾಂಪ್ರದಾಯಿಕ ವಿವಿಗಳ ಸಂಶೋಧನಾ ವಿಭಾಗದ ಪಟ್ಟಿಯಲ್ಲಿ 39ನೇ ಸ್ಥಾನದ ಮೂಲಕ ಅತ್ಯುತ್ತಮ ಸಾಧನೆಯನ್ನು ಕುವೆಂಪು ವಿಶ್ವವಿದ್ಯಾಲಯ ತೋರಿದ್ದು, ನಂತರದ ಸ್ಥಾನದಲ್ಲಿ ಮೈಸೂರು ವಿಶ್ವವಿದ್ಯಾಲಯವಿದೆ (48). ಮಣಿಪಾಲ ವಿವಿ (8) ಮತ್ತು ಬೆಂಗಳೂರು ವಿವಿ (32) ಕೂಡ ಉತ್ತಮ ಸಾಧನೆ ತೋರಿವೆ. ಸಂಶೋಧನೆಯಲ್ಲೂ ಗಮನಾರ್ಹ ಸಾಧನೆ ತೋರುತ್ತಿರುವ ಕುವೆಂಪು ವಿ.ವಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ 39ನೇ ರ್‍ಯಾಂಕಿಂಗ್ ಪಡೆದಿದೆ.

ಭಾರತದ ಸಂಸ್ಥೆಗಳ ಒಟ್ಟಾರೆ (ಸಂಶೋಧನೆ, ಆವಿಷ್ಕಾರ ಮತ್ತು ಸಾಮಾಜಿಕ ಪರಿಣಾಮ) ರ್‍ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ಮಣಿಪಾಲ ಡೀಮ್ಡ್ ವಿ.ವಿ 12, ಬೆಂಗಳೂರು ವಿ.ವಿ 58, ಮೈಸೂರು ವಿ.ವಿ 62, ಮಂಗಳೂರು ವಿ.ವಿ 95 ಮತ್ತು ಧಾರವಾಡದ ಕರ್ನಾಟಕ ವಿ.ವಿ 91ನೇ ಸ್ಥಾನ ಪಡೆದಿವೆ. ವಿಶ್ವವಿದ್ಯಾಲಯದ ಸಾಧನೆಗೆ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.