ಆನವಟ್ಟಿ: ಇಲ್ಲಿನ ಕೆಪಿಎಸ್ ಶಾಲೆಯ ಮೊದಲ ದಿನ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ಗುಲಾಬಿ ಹೂ ಹಾಗೂ ಸಿಹಿ ನೀಡುವ ಮೂಲಕ ಸಂಭ್ರಮದಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು.
ಶುಕ್ರವಾರ ಕೆಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಹ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ನೀಡಬೇಕು. ಶಿಕ್ಷಕರು ಹಾಗೂ ಪೋಷಕರನ್ನು ಗೌರವ ಭಾವದಿಂದ ಕಾಣಬೇಕು. ಉತ್ತಮ ಸಂಸ್ಕಾರ ರೂಢಿಸಿಕೊಂಡಾಗ ಮಾತ್ರ ಸಾಧನೆಯ ಜೊತೆಗೆ ಉತ್ತಮ ಗೌರವ ಸಿಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 621 ಅಂಕ ಪಡೆದು ಸರ್ಕಾರಿ ಶಾಲೆಗಳಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಸಂಜಯ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಪ್ರೋತ್ಸಹ ಧನ ನೀಡಿ ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಉಪ ಪ್ರಾಂಶುಪಾಲ ಎಂ.ಮಹದೇವಪ್ಪ, ಸಿಡಿಸಿ ಕಾರ್ಯಾಧ್ಯಕ್ಷ ನಾಗರಾಜ ಶುಂಠಿ, ಇಸಿಒ ಪ್ರೇಮ್ ಕುಮಾರ್, ಸಿಆರ್‌ಪಿ ಎಸ್. ರುದ್ರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.